ADVERTISEMENT

ಮಂಕಿಪಾಕ್ಸ್: ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾಕ್ಕೆ ಉತ್ತರ ಪ್ರದೇಶ ನಿರ್ಧಾರ

ಐಎಎನ್ಎಸ್
Published 27 ಮೇ 2022, 6:19 IST
Last Updated 27 ಮೇ 2022, 6:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

‘ದದ್ದುಗಳು ಕಂಡುಬಂದವರನ್ನು ಮಾತ್ರ ನಿಗಾದಲ್ಲಿ ಇರಿಸಿದರೆ ಸಾಕಾಗುವುದಿಲ್ಲ. ಮಂಕಿಪಾಕ್ಸ್ ಪತ್ತೆಯಾಗಿರುವ ದೇಶಗಳಿಂದ ಬಂದ ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೂ ನಿಗಾ ಇರಿಸಬೇಕಾಗಿದೆ. ಅಂಥವರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಬೇಕಾಗಿದೆ’ ಎಂದು ಸಾಂಕ್ರಾಮಿಕ ರೋಗಗಳ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಹೊಸ ಮಾರ್ಗಸೂಚಿಯನ್ನೂ ಇಲಾಖೆ ಬಿಡುಗಡೆ ಮಾಡಿದೆ.

ಸೋಂಕು ತಗುಲಿರುವ ಶಂಕೆ ಇರುವವರು ವೈದ್ಯರು ಸೂಚಿಸುವವರೆಗೆ ಪ್ರತ್ಯೇಕವಾಸದಲ್ಲಿರಬೇಕು. 21 ದಿನಗಳಿಂದೀಚೆಗೆ ಸೋಂಕಿತರ ಸಂಪರ್ಕಕ್ಕೆ ಬಂದವರ ರಕ್ತ ಮತ್ತು ಕಫದ ಮಾದರಿಯನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಬೇಕು ಎಂದು ಎಲ್ಲ ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿರುವ ದೇಶಗಳಿಂದ ಬಂದಿರುವ ಶಂಕಿತ ಸೋಂಕಿತರ ಮೇಲೆ ನಿಗಾ ವಹಿಸಲು ಆಸ್ಪತ್ರೆಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಬುಧವಾರ ಸಲಹೆ ನೀಡಿತ್ತು. ಈಗಾಗಲೇ ಗುರುತಿಸಲಾಗಿರುವ ಆರೋಗ್ಯ ಕೇಂದ್ರಗಳಲ್ಲಿ ಶಂಕಿತ ಸೋಂಕಿತರನ್ನು ಪ್ರತ್ಯೇಕವಾಗಿರಿಸಲೂ ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.