ADVERTISEMENT

ಉತ್ತರ ಪ್ರದೇಶ ಚುನಾವಣೆ: ಎಐಎಂಐಎಂ ಜತೆ ಮೈತ್ರಿ ಇಲ್ಲ ಎಂದ ಅಖಿಲೇಶ್ ಯಾದವ್

ಐಎಎನ್ಎಸ್
Published 12 ನವೆಂಬರ್ 2021, 8:30 IST
Last Updated 12 ನವೆಂಬರ್ 2021, 8:30 IST
ಅಖಿಲೇಶ್ ಯಾದವ್ (ಪಿಟಿಐ ಚಿತ್ರ)
ಅಖಿಲೇಶ್ ಯಾದವ್ (ಪಿಟಿಐ ಚಿತ್ರ)   

ಲಖನೌ: ‘ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಬಯಕೆ ಹೊಂದಿರುವ ಎಲ್ಲ ಪಕ್ಷಗಳಿಗೆ ಮೈತ್ರಿಗೆ ಸ್ವಾಗತವಿದೆ. ಆದರೆ ಎಐಎಂಐಎಂ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಎಐಎಂಐಎಂ ಜತೆ ಮೈತ್ರಿ ಇಲ್ಲವೆಂದು ಇದೇ ಮೊದಲ ಬಾರಿಗೆ ಅವರು ಸ್ಪಷ್ಟಪಡಿಸಿದ್ದಾರೆ.

ಯಾದವ್ ಅವರ ನಿಲುವಿನಿಂದ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಭಾಗಿದಾರಿ ಸಂಕಲ್ಪ್ ಮೋರ್ಚಾ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.

ADVERTISEMENT

ರಾಜ್‌ಭರ್ ಅವರು ಅಕ್ಟೋಬರ್ 27ರಂದು ಎಸ್‌ಪಿ ಜತೆ ಮೈತ್ರಿಯ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಎಐಎಂಐಎಂ ಪಕ್ಷವು ಭಾಗಿದಾರಿ ಸಂಕಲ್ಪ್ ಮೋರ್ಚಾದ ಪ್ರಮುಖ ಅಂಗವಾಗಿತ್ತು. ಇದೀಗ ಅಖಿಲೇಶ್ ಹೇಳಿಕೆಯಿಂದ ಮೈತ್ರಿಕೂಟದ ಸದಸ್ಯರಲ್ಲಿ ಕಳವಳಕ್ಕೆ ಕಾರಣವಾಗಿದೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಮೋರ್ಚಾ ಹಾಗೂ ರಾಜ್‌ಭರ್ ಜತೆಗಿನ ಬಾಂಧವ್ಯದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಜ್‌ಭರ್ ಅವರು, ‘ಈ ಬಗ್ಗೆ ಪ್ರತಿಕ್ರಿಯೆ ನೀಡುವುದ ಏನಿದೆ? ಪರಿಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ ಅವರು ಮಾಡಿಕೊಳ್ಳಲಿದ್ದಾರೆ’ ಎಂದಷ್ಟೇ ಹೇಳಿದ್ದಾರೆ.

‘ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಾ ಇದ್ದೇವೆ. ಸಂದರ್ಭ ಬಂದರೆ ಏಕಾಂಗಿಯಾಗಿ ಚುನಾವಣೆ ಎದುರಿಸಲೂ ಸಿದ್ಧರಿದ್ದೇವೆ’ ಎಂದು ಎಐಎಂಐಎಂ ನಾಯಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.