ADVERTISEMENT

ಉತ್ತರ ಪ್ರದೇಶ: ಒಂದೂವರೆ ವರ್ಷದ ಬಳಿಕ ಪ್ರಾಥಮಿಕ ತರಗತಿಗಳು ಆರಂಭ, ಕಡಿಮೆ ಹಾಜರಾತಿ

ಪಿಟಿಐ
Published 1 ಸೆಪ್ಟೆಂಬರ್ 2021, 10:09 IST
Last Updated 1 ಸೆಪ್ಟೆಂಬರ್ 2021, 10:09 IST
ಪ್ರಯಾಗರಾಜ್‌ನಲ್ಲಿ ಶಾಲೆಯನ್ನು ಪುನಃ ತೆರೆದ ನಂತರ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದಾರೆ.
ಪ್ರಯಾಗರಾಜ್‌ನಲ್ಲಿ ಶಾಲೆಯನ್ನು ಪುನಃ ತೆರೆದ ನಂತರ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದಾರೆ.   

ಲಖನೌ: ಕೋವಿಡ್-19ನಿಂದಾಗಿ ಕಳೆದ ವರ್ಷ ದೇಶದಲ್ಲಿ ಮೊದಲ ಲಾಕ್‌ಡೌನ್ ಜಾರಿಯಾದಾಗ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿತ್ತು. ಉತ್ತರ ಪ್ರದೇಶದಲ್ಲಿ ಇದೀಗ ಒಂದೂವರೆ ವರ್ಷದ ನಂತರ ಬುಧವಾರ ಮುಚ್ಚಿದ್ದ 1-5ನೇ ತರಗತಿಯ ಶಾಲೆಗಳನ್ನು ಆರಂಭಿಸಲಾಗಿದೆ.

9 ರಿಂದ 12 ಮತ್ತು 6 ರಿಂದ 8 ತರಗತಿಗಳನ್ನು ಕ್ರಮವಾಗಿ ಆಗಸ್ಟ್ 16 ಮತ್ತು ಆಗಸ್ಟ್ 24 ರಿಂದ ಆರಂಭಿಸಲಾಗಿದೆ.

ವಿದ್ಯಾರ್ಥಿಗಳಿಗೆ ಶುಭಾಶಯಗಳು. ಇಂದಿನಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ADVERTISEMENT

ದೇಶದಾದ್ಯಂತ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಕೆಲವು ಶಾಲೆಗಳಲ್ಲಿ ಹಾಜರಾತಿ ತುಂಬಾ ಕಡಿಮೆಯಾಗಿರುವುದು ಕಂಡುಬಂದಿದೆ.

'ಪೋಷಕರು ಒಪ್ಪಿ ನಮೂನೆಯನ್ನು ಭರ್ತಿ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಬರಲು ಅವಕಾಶವಿತ್ತು. 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಕೆಲವು ತರಗತಿಗಳಲ್ಲಿ, ಕೇವಲ ಒಂದು ಅಥವಾ ಇಬ್ಬರು ಪೋಷಕರು ಮಾತ್ರ ಒಪ್ಪಿಗೆ ನೀಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಹೆದರುತ್ತಿರುವುದರಿಂದ ನಿಗದಿತ ವೇಳಾಪಟ್ಟಿಯಂತೆ ಆನ್‌ಲೈನ್ ತರಗತಿಗಳು ಕೂಡ ಮುಂದುವರಿಯುತ್ತಿವೆ ಎಂದು 'ಸೇಂಟ್ ಫ್ರಾನ್ಸಿಸ್ ಕಾಲೇಜಿನ ಶಿಕ್ಷಕರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮೂರು ಗಂಟೆಗಳ ಎರಡು ಶಿಫ್ಟ್‌ಗಳಲ್ಲಿ ತರಗತಿಗಳು ಪ್ರಾರಂಭವಾಗಿದ್ದು, ಬೆಳಿಗ್ಗೆ 8 ರಿಂದ 11 ಗಂಟೆವರೆಗೆ ಮತ್ತು 11.30 ರಿಂದ ಮಧ್ಯಾಹ್ನ 3:30 ರವರೆಗೆ ನಡೆಯಲಿವೆ. ಪ್ರತಿ ಶಿಫ್ಟ್‌ನಲ್ಲಿ ತರಗತಿಯ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಶಾಲೆಗೆ ಹಿಂದಿರುಗಿದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಕೆಲವು ಶಾಲೆಗಳು ಪ್ರವೇಶ ದ್ವಾರಗಳನ್ನು ಬಲೂನುಗಳಿಂದ ಅಲಂಕರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.