ADVERTISEMENT

ಆನ್‌ಲೈನ್ ಪಾಠ ಮಾಡುವಾಗ ನಾಮಪದಕ್ಕೆ ಪಾಕಿಸ್ತಾನದ ಉದಾಹರಣೆ ನೀಡಿದ ಶಿಕ್ಷಕಿ ವಜಾ

ಸಂಜಯ ಪಾಂಡೆ
Published 25 ಮೇ 2020, 12:47 IST
Last Updated 25 ಮೇ 2020, 12:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಗೋರಖ್‌ಪುರ್ ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ಆನ್‌ಲೈನ್ ಪಾಠ ಮಾಡುತ್ತಿರುವಾಗ ನಾಮಪದಕ್ಕೆ ಉದಾಹರಣೆಯಾಗಿ ವಾಕ್ಯದಲ್ಲಿ ಪಾಕಿಸ್ತಾನ ಎಂದು ಬಳಸಿದ್ದರು ಈ ರೀತಿ ಉದಾಹರಣೆ ಕೊಟ್ಟಿದ್ದಕ್ಕಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಪಾಕಿಸ್ತಾನ ನಮ್ಮ ತಾಯ್ನಾಡು, ನಾನು ಪಾಕಿಸ್ತಾನದ ಸೇನೆ ಸೇರುತ್ತೇನೆ. ರಶೀದ್ ಮಿಹನಾಸ್ (ಪಾಕ್ ಪೈಲಟ್) ಧೀರ ಯೋಧ.. ಈ ರೀತಿಯ ಉದಾಹರಣೆಯನ್ನು ಅವರು ನೀಡಿದ್ದರು ಎಂದು ಆರೋಪಿಸಲಾಗಿದೆ.

ಮೂಲಗಳ ಪ್ರಕಾರ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಈ ಶಿಕ್ಷಕಿ ಈ ರೀತಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರು ಆಕ್ಷೇಪ ವ್ಯಕ್ತ ಪಡಿಸಿ ಶಾಲೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಶಾಲಾ ವ್ಯವಸ್ಥಾಪಕ ಮಂಡಳಿಯು ಶಿಕ್ಷಕಿಯನ್ನು ಅಮಾನತು ಮಾಡಿ, ಅವರಿಂದ ವಿವರಣೆ ಕೇಳಿದ್ದಾರೆ.

ADVERTISEMENT

ವಾಕ್ಯ ಗಮನಿಸದೆ ಕಾಪಿ ಪೇಸ್ಟ್ ಮಾಡಿದ್ದು ಎಂದು ಶಿಕ್ಷಕಿ ಹೇಳಿದ್ದಾರೆ.

ನಾನು ದೇಶಪ್ರೇಮಿ. ಅದು ತಪ್ಪೇ, ಆದರೆ ನಾನು ಉದ್ದೇಶಪೂರ್ವಕ ಮಾಡಿಲ್ಲ ಎಂದು ಶಿಕ್ಷಕಿ ಶಾಲೆಯ ವ್ಯವಸ್ಥಾಪಕ ಮಂಡಳಿಗೆ ವಿವರಣೆ ನೀಡಿದ್ದಾರೆ. ನಾನು ಭಾರತ ಎಂದು ಬಳಸುವವಳಿದ್ದೆ, ಆದರೆ ಕಾಪಿ ಪೇಸ್ಟ್ ಮಾಡಿದ್ದರಿಂದ ಹಾಗಾಯಿತು. ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು.

ಆದಾಗ್ಯೂ,ಸೋಮವಾರ ಆ ಶಿಕ್ಷಕಿಯನ್ನು ವಜಾ ಮಾಡಲಾಗಿದೆ. ಇದೆಲ್ಲ ಆದ ನಂತರ ಶಿಕ್ಷಕಿ ಖಿನ್ನತೆಗೊಳಗಾಗಿದ್ದಾರೆ.
ಶಿಕ್ಷಕಿ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಆದಾಗ್ಯೂ, ಈ ಬಗ್ಗೆ ಯಾರೂ ಪೊಲೀಸರಿಗೆ ದೂರ ನೀಡಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.