ADVERTISEMENT

2017ಕ್ಕೂ ಮುನ್ನ ಉತ್ತರಪ್ರದೇಶವನ್ನು ಗ್ಯಾಂಗ್‌ಸ್ಟರ್‌ಗಳು ನಡೆಸುತ್ತಿದ್ದರು: ಮೋದಿ

ಪಿಟಿಐ
Published 14 ಸೆಪ್ಟೆಂಬರ್ 2021, 10:16 IST
Last Updated 14 ಸೆಪ್ಟೆಂಬರ್ 2021, 10:16 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಆಲಿಗಡ: 2017ಕ್ಕೂ ಮುನ್ನ ಉತ್ತರ ಪ್ರದೇಶ ಸರ್ಕಾರವನ್ನು ದರೋಡೆಕೋರರು ಮತ್ತು ಮಾಫಿಯಾಗಳು ನಡೆಸುತ್ತಿದ್ದವು. ಆದರೆ, ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಎಲ್ಲವೂ ಬದಲಾಗಿದೆ ಮತ್ತು ಅಂತಹವರು ಇದೀಗ ಕಂಬಿಗಳ ಹಿಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ರಾಜಾ ಮಹೇಂದ್ರ ಪ್ರತಾಪಸಿಂಹ ರಾಜ್ಯ ವಿಶ್ವವಿದ್ಯಾಲಯದ ಶಿಲಾನ್ಯಾಸದ ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ಮೀಸಲಾದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಇರುವ ಎಲ್ಲ ದಾರಿಗಳನ್ನು ಮುಚ್ಚಲಾಗುತ್ತಿತ್ತು. ಆದರೆ ಈಗ ಅಂತಹ ಯಾವುದೇ ಅಡೆತಡೆಗಳಿಲ್ಲ ಮತ್ತು ಈ ಯೋಜನೆಗಳ ಪ್ರಯೋಜನಗಳು ಅಗತ್ಯವಿರುವವರಿಗೆ ತಲುಪುತ್ತಿವೆ ಎಂದು ಹೇಳಿದರು.

'ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕರಾದ ರಾಜ ಮಹೇಂದ್ರ ಪ್ರತಾಪಸಿಂಹ ಅವರ ಸ್ಮರಣೆ ಮತ್ತು ಗೌರವಾರ್ಥವಾಗಿ ರಾಜ್ಯ ಸರ್ಕಾರ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದೆ. ಅಲೀಗಢದ ಕೋಲ್ ತೆಹ್ಸಿಲ್‌ನ ಲೋಧಾ ಗ್ರಾಮ ಮತ್ತು ಮುಸೇಪುರ್ ಕರೀಂ ಜಾರೌಲಿ ಗ್ರಾಮದಲ್ಲಿ ಒಟ್ಟು 92 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ' ಎಂದು ತಿಳಿಸಿದರು.

ADVERTISEMENT

'ಭಾರತವನ್ನು ಮೊದಲು ರಕ್ಷಣಾ ಉಪಕರಣಗಳ ಆಮದುದಾರ ಎಂದು ಪರಿಗಣಿಸಲಾಗಿತ್ತು. ಆದರೆ ಇಂದು ದೇಶವನ್ನು ಪ್ರಮುಖ ರಕ್ಷಣಾ ಸಾಮಗ್ರಿಗಳ ರಫ್ತುದಾರ ಎಂದು ಪರಿಗಣಿಸಲಾಗಿದೆ. ಇಂದು ಭಾರತ ಮಾತ್ರವಲ್ಲ, ಪ್ರಪಂಚವು ಆಧುನಿಕ ಗ್ರೆನೇಡ್‌ಗಳು, ರೈಫಲ್‌ಗಳು, ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಯುದ್ಧನೌಕೆಗಳಿಂದ ಹಿಡಿದು ಎಲ್ಲವನ್ನು ದೇಶದಲ್ಲೇ ಹೇಗೆ ತಯಾರಿಸಲಾಗುತ್ತಿದೆ ಎಂಬುದನ್ನು ನೋಡುತ್ತಿವೆ' ಎಂದು ಅವರು ಹೇಳಿದರು.

ಇದೇವೇಳೆ, ಹಿರಿಯ ಬಿಜೆಪಿ ನಾಯಕ ದಿವಂಗತ ಕಲ್ಯಾಣ್ ಸಿಂಗ್ ಅವರನ್ನು ನೆನಪಿಸಿಕೊಂಡ ಮೋದಿ, ಈ ಸಂದರ್ಭದಲ್ಲಿ ಅವರು ಇದ್ದಿದ್ದರೆ ಅವರ ತವರು ಜಿಲ್ಲೆಯಲ್ಲಿ ರಾಜ ಮಹೇಂದ್ರ ಪ್ರತಾಪ ಸಿಂಹ ಅವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ನಿರ್ಮಾಣವಾಗುತ್ತಿರುವುದನ್ನು ಮೆಚ್ಚಿಕೊಳ್ಳುತ್ತಿದ್ದರು' ಎಂದರು.

ಈ ಮಧ್ಯೆ, ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ವಿಶ್ವವಿದ್ಯಾಲಯದ ಬಗ್ಗೆ ಪ್ರಧಾನಿಗೆ ವಿವರಿಸಿದರು. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.