ADVERTISEMENT

ಉತ್ತರಾಖಂಡ ಮೇಘಸ್ಫೋಟ | ನಾಲ್ಕು ಹೆಲಿಕಾಪ್ಟರ್‌ಗಳ ಬಳಕೆ: ಮತ್ತೆ 287 ಮಂದಿ ರಕ್ಷಣೆ

ಪಿಟಿಐ
Published 9 ಆಗಸ್ಟ್ 2025, 10:59 IST
Last Updated 9 ಆಗಸ್ಟ್ 2025, 10:59 IST
<div class="paragraphs"><p>ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಬಳಿ ಶನಿವಾರವೂ ರಕ್ಷಣಾ ಕಾರ್ಯ ನಡೆಯಿತು</p></div>

ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಬಳಿ ಶನಿವಾರವೂ ರಕ್ಷಣಾ ಕಾರ್ಯ ನಡೆಯಿತು

   

–ಪಿಟಿಐ ಚಿತ್ರ 

ಉತ್ತರಕಾಶಿ: ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ನಲುಗಿರುವ ಉತ್ತರಾಖಂಡದ ಉತ್ತರಕಾಶಿಯಲ್ಲಿ ಐದನೇ ದಿನವಾದ ಶನಿವಾರವೂ ರಕ್ಷಣಾ ಕಾರ್ಯ ಮುಂದುವರಿಯಿತು.

ADVERTISEMENT

ಜಿಲ್ಲೆಯ ವಿವಿಧೆಡೆ ಆಶ್ರಯ ಪಡೆದಿದ್ದ ಜನರನ್ನು ರಕ್ಷಿಸಲು ಉತ್ತರಾಖಂಡ ನಾಗರಿಕ ವಿಮಾನಯಾನ ಪ್ರಾಧಿಕಾರದ ನಾಲ್ಕು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.  170 ಜನರನ್ನು ಮತಲಿಯ ಐಟಿಬಿಪಿ ಹೆಲಿಪ್ಯಾಡ್‌ ಹಾಗೂ 107 ಜನರನ್ನು ಚಿನ್ಯಾಲೀಸೌರ್‌ ಏರ್‌ಸ್ಟ್ರಿಪ್‌ಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಹಪೀಡಿತ ಧರಾಲಿ ಪ್ರದೇಶದ ವಿವಿಧ ಭಾಗಗಳಿಂದ ಒಂದು ಸಾವಿರಕ್ಕಿಂತ ಹೆಚ್ಚಿನ ಜನರನ್ನು ಸ್ಥಳಾಂತರಿಸಲಾಗಿದೆ. ಕಳೆದ ಮಂಗಳವಾರ ಸಂಭವಿಸಿದ್ದ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಧರಾಲಿ ಗ್ರಾಮವು ಹೊರಗಿನ ಸಂಪರ್ಕವನ್ನು ಕಡಿದುಕೊಂಡಿದೆ. 

ಧರಾಲಿ ಹಾಗೂ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಶನಿವಾರ ಬೆಳಿಗ್ಗೆ ಜಾಲಿಗ್ರಾಂಟ್‌ ವಿಮಾನ ನಿಲ್ದಾಣದಿಂದ ಆಶ್ರಯ ಶಿಬಿರಗಳಿಗೆ ಭಾರತೀಯ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ ಮೂಲಕ ಜನರೇಟರ್‌ಗಳನ್ನು ಸಾಗಿಸಲಾಯಿತು. 

ಪ್ರವಾಹಪೀಡಿತ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಸುಧಾರಿಸಲು ಗಂಗ್ನಾನಿ ಸಮೀಪ ಲಿಮ್ಚಿಗಡ್‌ ಬಳಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗುತ್ತಿದೆ.

ಗಂಗೋತ್ರಿ ಹೆದ್ದಾರಿಯ ಅನೇಕ ಕಡೆಗಳಲ್ಲಿ ಹಾನಿ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ, ಅವಶೇಷಗಳಡಿ ಸಿಲುಕಿರುವ ವ್ಯಕ್ತಿಗಳ ಶೋಧಕ್ಕೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಸಾಗಿಸಲು ಅಡ್ಡಿಯಾಗಿದೆ.

ಬಾಧಿತ ಪ್ರದೇಶಗಳಲ್ಲಿ 15ರಿಂದ 20 ಅಡಿ ಎತ್ತರದವರೆಗೆ ಅವಶೇಷಗಳು ಹರಡಿದ್ದು, ಅದರಡಿ ಸಿಲುಕಿರುವ ಜನರನ್ನು ಪತ್ತೆಹಚ್ಚುವುದೇ ರಕ್ಷಣಾ ಸಿಬ್ಬಂದಿಗೆ ಸವಾಲಾಗಿದೆ.

ಪರಿಹಾರ ಘೋಷಣೆ: ಧರಾಲಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಶನಿವಾರ ಘೋಷಿಸಿದ್ದಾರೆ.

ನಾಲ್ವರ ವಿರುದ್ಧ ಎಫ್‌ಐಆರ್‌: ಧರಾಲಿ ಪ್ರವಾಹದ ಕುರಿತು ಅಕ್ಷೇಪಾರ್ಹ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ಆರೋಪದಡಿ ನಾಲ್ವರ ವಿರುದ್ಧ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ಮಹಾರಾಷ್ಟ್ರದ ಮಹಿಳೆ ನಾಪತ್ತೆ

ಮುಂಬೈ: ಧರಾಲಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದಿಂದ ಧರಾಲಿ ಹಾಗೂ ಸುತ್ತಲಿನ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದ 172 ಪ್ರವಾಸಿಗರ ಪೈಕಿ 171 ಮಂದಿ ಸುರಕ್ಷಿತವಾಗಿದ್ದಾರೆ. ಕೃತಿಕಾ ಜೈನ್‌ ಎಂಬುವರು ನಾಪತ್ತೆಯಾಗಿದ್ದು ಅವರ ಪತ್ತೆಗೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ಗಿರೀಶ್‌ ಮಹಾಜನ್‌ ಶನಿವಾರ ತಿಳಿಸಿದ್ದಾರೆ.

₹5 ಲಕ್ಷ ಪರಿಹಾರ: ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ನೀಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಇದಲ್ಲದೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ವಿಪತ್ತಿನಿಂದ ಹಾನಿಗೊಳಗಾದ ಗ್ರಾಮಸ್ಥರ ಪುನರ್ವಸತಿ ಸೇರಿದಂತೆ ಒಟ್ಟಾರೆ ಸುಸ್ಥಿರ ಜೀವನೋಪಾಯವನ್ನು ಬಲಪಡಿಸಲು ಕಂದಾಯ ಇಲಾಖೆಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮತಿಯು ಒಂದು ವಾರದೊಳಗೆ ಸರ್ಕಾರಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಲಿದೆ ಎಂದು ಧಾಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.