ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯ
Credit: X/@ANI
ಹರಿದ್ವಾರ: ಹರಿದ್ವಾರದ ಮಾನಸಾದೇವಿ ದೇಗುಲದಲ್ಲಿ ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ ಮತ್ತು 28 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
‘ಬೆಳಿಗ್ಗೆ 9 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ದೇಗುಲದ ಮೆಟ್ಟಿಲುಗಳ ಸಮೀಪ ಹರಿದು ಬಿದ್ದ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದೆ ಎಂಬ ವದಂತಿ ಹರಡಿತು. ಹೀಗಾಗಿ ಜನರು ಗಾಬರಿಗೊಂಡರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ಭಾನುವಾರವಾದ ಕಾರಣ ಭಕ್ತರ ಸಂಖ್ಯೆಯೂ ಹೆಚ್ಚಿತ್ತು’ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಸಿಂಗ್ ದೋಬಲ್ ಅವರು ತಿಳಿಸಿದರು.
ಸುಮಾರು 35 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಮಕ್ಕಳು, ಮಹಿಳೆಯರು ಸೇರಿದಂತೆ ಅಸಂಖ್ಯಾತ ಜನರು ದೇಗುಲ ಪ್ರವೇಶಕ್ಕಾಗಿ ಕಿರಿದಾದ ದ್ವಾರದಲ್ಲಿ ನುಗ್ಗುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆರುಷ್ (12), ಸಕಲ್ ದೇವ್ (18), ವಿಕ್ಕಿ (18), ವಿಪಿನ್ (18), ವಕೀಲ್ ಮತ್ತು ಶಾಂತಿ ಮೃತರು. ಗಾಯಾಳುಗಳ ಪೈಕಿ ಐವರನ್ನು ಋಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ರಾಜ್ಯ ವಿಪತ್ತು ನಿರ್ವಹಣೆ ಪಡೆ, ಸ್ಥಳೀಯ ಪೊಲೀಸರು ಮತ್ತು ಇತರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನ್ಯಾಯಾಂಗ ತನಿಖೆಗೆ ಆದೇಶ:
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಮಾನಸಾದೇವಿ ದೇಗುಲದಲ್ಲಿ ವದಂತಿಯಿಂದಾಗಿ ಕಾಲ್ತುಳಿತ ಸಂಭವಿಸಿದೆ. ವದಂತಿ ಹರಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಧಾಮಿ ಹೇಳಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ₹50000 ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದರು. ಹರಿದ್ವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ಅವರು ವಿಚಾರಿಸಿದರು.
ಇದು ಕೇವಲ ಅವಘಡ ಅಲ್ಲ; ವ್ಯವಸ್ಥೆಯ ವೈಫಲ್ಯ. ಧಾರ್ಮಿಕ ಕ್ಷೇತ್ರದಲ್ಲಿ ಇಂಥ ದುರಂತ ಸಂಭವಿಸಿರುವುದು ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.