ADVERTISEMENT

ಉತ್ತರಾಖಂಡ ಚುನಾವಣೆ: ಎಎಪಿಗೆ ಒಂದು ಅವಕಾಶ ನೀಡಿ ಎಂದ ಸಿಸೋಡಿಯಾ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:48 IST
Last Updated 12 ಜನವರಿ 2022, 19:48 IST
ಮನೀಷ್ ಸಿಸೋಡಿಯಾ
ಮನೀಷ್ ಸಿಸೋಡಿಯಾ   

ನ್ಯೂ ಟಿಹ್ರಿ, ಉತ್ತರಾಖಂಡ (ಪಿಟಿಐ): ‘ಉತ್ತರಾಖಂಡದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಟಿಹ್ರಿ ಆಣೆಕಟ್ಟಿನಿಂದ ನಿರಾಶ್ರಿತರಾದವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ’ ಎಂದು ದೆಹಲಿ ಉಪಮುಖ್ಯಮಂತ್ರಿ, ಎಎಪಿ ಹಿರಿಯ ನಾಯಕ ಮನೀಷ್ ಸಿಸೋಡಿಯಾ ಬುಧವಾರ ಇಲ್ಲಿ ಘೋಷಿಸಿದ್ದಾರೆ.

‘ಇಷ್ಟು ವರ್ಷಗಳ ಕಾಲ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ಆಯ್ಕೆ ಮಾಡುತ್ತಿದ್ದೀರಿ. ಈ ಬಾರಿ ಎಎಪಿಗೆ ಒಂದು ಅವಕಾಶ ನೀಡಿ. ಉತ್ತರಾಖಂಡದ ಸಮಸ್ಯೆಗಳಿಗೆ ಅರವಿಂದ್‌ ಕೇಜ್ರಿವಾಲ್ ಅವರ ಬಳಿ ಮಾತ್ರವೇ ಪರಿಹಾರವಿದೆ’ ಎಂದು ಅವರು ಮತದಾರರನ್ನು ಕೋರಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಟಿಹ್ರಿ ಅಣೆಕಟ್ಟು ಪ್ರದೇಶದಿಂದ ಸ್ಥಳಾಂತರ ಆದವರು ಈಗಲೂ ತೊಂದರೆಯಲ್ಲೇ ಇರುವುದು ದುರದೃಷ್ಟಕರ. ಜನರು ನಮ್ಮನ್ನು ಚುನಾಯಿಸಿದರೆ ನಾವು ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಟಿಹ್ರಿ ಅಣೆಕಟ್ಟಿನ ಆದಾಯದಲ್ಲಿ ₹1,100 ಕೋಟಿಯು ಉತ್ತರ ಪ್ರದೇಶಕ್ಕೆ ಹೋಗುತ್ತಿದೆ. ಅದು ಉತ್ತರಾಖಂಡಕ್ಕೆ ದೊರಕುವಂತೆ ಮಾಡುತ್ತೇವೆ. ಅದೇ ಹಣದಲ್ಲಿ 300 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ಎಲ್ಲಾ ಮನೆಗಳಿಗೆ ನೀಡುತ್ತೇವೆ’ ಎಂದರು.

ADVERTISEMENT

ಇದಕ್ಕೂ ಮೊದಲು ಸಿಸೋಡಿಯಾ ಅವರು ಬೌರಾರಿ ಪ್ರದೇಶದ ಅಭ್ಯರ್ಥಿ ತ್ರಿಲೋಕ್‌ ಸಿಂಗ್‌ ನೇಗಿ ಪರ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ನಮ್ಮನ್ನು ಚುನಾಯಿಸಿದರೆ ದೆಹಲಿ ಮಾದರಿ ಅಭಿವೃದ್ಧಿಯನ್ನು ಉತ್ತರಾಖಂಡದಲ್ಲಿ ತರಲಾಗುವುದು ಎಂದಿದ್ದಾರೆ. ಬಳಿಕ, ಕುತ್ಥಾ ಗ್ರಾಮಕ್ಕೆ ಭೇಟಿ ನೀಡಿದ ಅವರು ಅಲ್ಲಿಯ ಸ್ಥಳೀಯ ಆಹಾರವನ್ನು ಸವಿದರು. ರಾಜ್ಯದ ಸ್ಥಳೀಯ ಆಹಾರವನ್ನು ಪ್ರಚುರಪಡಿಸಲು ಅವರ ಪಕ್ಷ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.