ADVERTISEMENT

ಉತ್ತರಕಾಶಿಯಲ್ಲಿ ಮೇಘಸ್ಫೋಟ: 'ಕ್ಷಣಾರ್ಧದಲ್ಲಿ ದುರಂತ.. ಎಲ್ಲರೂ ಅಸಹಾಯಕ..'

ಆಘಾತದಿಂದ ಹೊರಬರದ ಗ್ರಾಮಸ್ಥರು

ಪಿಟಿಐ
Published 7 ಆಗಸ್ಟ್ 2025, 15:36 IST
Last Updated 7 ಆಗಸ್ಟ್ 2025, 15:36 IST
ಉತ್ತರಕಾಶಿ ಜಿಲ್ಲೆ ಧರಾಲಿ ಗ್ರಾಮದಲ್ಲಿ ಮೇಘ ಸ್ಫೋಟದಿಂದ ಉಂಟಾದ ದಿಢೀರ್‌ ಪ್ರವಾಹದಿಂದಾಗಿ ಹಲವಾರು ಕಟ್ಟಡಗಳು ನಾಶವಾಗಿವೆ
ಉತ್ತರಕಾಶಿ ಜಿಲ್ಲೆ ಧರಾಲಿ ಗ್ರಾಮದಲ್ಲಿ ಮೇಘ ಸ್ಫೋಟದಿಂದ ಉಂಟಾದ ದಿಢೀರ್‌ ಪ್ರವಾಹದಿಂದಾಗಿ ಹಲವಾರು ಕಟ್ಟಡಗಳು ನಾಶವಾಗಿವೆ   

ಧರಾಲಿ(ಉತ್ತರಾಖಂಡ): ಉತ್ತರಕಾಶಿಯ ಮುಖ್ಬಾ ಗ್ರಾಮದ ಅಂಚಿನಲ್ಲಿರುವ ಮನೆಗಳ ಮುಂದೆ ಕುಳಿತಿರುವ ಮಹಿಳೆಯರಲ್ಲಿ ಈಗ ಮೌನ ಆವರಿಸಿದೆ; ದುಃಖ ಮಡುಗಟ್ಟಿದೆ. ತಮ್ಮ ಕಣ್ಣೆದುರೇ, ಪರ್ವತದಿಂದ ರಭಸದಿಂದ ನುಗ್ಗಿದ ಪ್ರವಾಹ ತನ್ನೊಟ್ಟಿಗೆ ಅಪಾರ ಪ್ರಮಾಣದ ಮಣ್ಣಿನ ರಾಶಿಯನ್ನು ತಂದು, ಧರಾಲಿ ಗ್ರಾಮವನ್ನು ಬಹುತೇಕ ಹೊಸಕಿ ಹಾಕಿದ್ದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ...

ಧರಾಲಿ ಗ್ರಾಮದಿಂದ 1.5 ಕಿ.ಮೀ. ದೂರದ ಈ ಗ್ರಾಮವು ತಗ್ಗು ಪ್ರದೇಶದಲ್ಲಿದೆ. ಪ್ರವಾಹದ ರಭಸಕ್ಕೆ ಕಟ್ಟಡಗಳು ಧರೆಗೆ ಉರುಳಿತ್ತಿರುವುದು, ಜನರು ಜೀವ ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದುದನ್ನು ಮಹಿಳೆಯರು ವಿವರಿಸುತ್ತಾರೆ.

ಜನರು ಪ್ರಾಣ ಕಳೆದುಕೊಂಡಿರುವುದು, ಮನೆ–ಅಂಗಡಿಗಳೂ ಸೇರಿ ಅನೇಕ ಕಟ್ಟಡಗಳು ಹಾನಿಯಾಗಿದ್ದಕ್ಕಾಗಿ ಮಡುಗಟ್ಟಿರುವ ದುಃಖವನ್ನು ಅವರ ನಿಸ್ತೇಜ ಮುಖಗಳು ಹೇಳುತ್ತಿವೆ.

ADVERTISEMENT

ಇದು ಧರಾಲಿ, ಮುಖ್ಬಾ ಹಾಗೂ ಇತರ ಗ್ರಾಮಗಳಲ್ಲಿ ಕಂಡು ಬರುವ ದೃಶ್ಯಗಳು. ದಿಢೀರ್‌ ಪ್ರವಾಹದಿಂದ ತಾವು ಅನುಭವಿಸಿದ ಆಘಾತದಿಂದ ಇಲ್ಲಿನ ಜನರು ಇನ್ನೂ ಹೊರಗೆ ಬಂದಿಲ್ಲ.

‘ಕ್ಷಣಾರ್ಧದಲ್ಲಿ ಈ ದುರಂತ ನಡೆದು ಹೋಯಿತು. ಯಾರೂ ಕೂಡ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಹಾಯಕ್ಕಾಗಿ ಹಲವರು ಮೊರೆ ಇಟ್ಟರಾದರೂ, ಸ್ಪಂದಿಸಲು ಅವಕಾಶವೇ ಇಲ್ಲದ ರೀತಿಯಲ್ಲಿ ಅವಘಡ ಸಂಭವಿಸಿತ್ತು’ ಎಂದು ಮುಖ್ಬಾ ಗ್ರಾಮದ ನಿವಾಸಿ ಆಶಾ ಸೆಮ್ವಾಲ್‌ ಹೇಳುತ್ತಾರೆ.

‘ನಾವು ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಜೋರಾಗಿ ಕಿರುಚಿ, ಶಿಳ್ಳೆ ಹಾಕುವ ಮೂಲಕ ಜನರನ್ನು ಎಚ್ಚರಿಸಲು ಯತ್ನಿಸಿದೆವು. ಧರಾಲಿ ನಮ್ಮ ಪಕ್ಕದ ಗ್ರಾಮ. ಆ ಗ್ರಾಮದ ಪ್ರತಿಯೊಬ್ಬರೂ ಪರಿಚಯ. ಅವರ ಪರಿಸ್ಥಿತಿ ಏನಾಗಿದೆ ಎಂಬುದು ದೇವರಿಗೇ ಗೊತ್ತು’ ಎಂದರು.

‘ಅದೊಂದು ದುಃಸ್ವಪ್ನ. ಕೆಲವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ’ ಎಂದು ಮಾರ್ಕಂಡೇಯ ಗ್ರಾಮದ ನಿಶಾ ಸೆಮ್ವಾಲ್‌ ಹೇಳುತ್ತಾರೆ.

ಮುಖ್ಬಾ ಗ್ರಾಮದ ಮತ್ತೊಬ್ಬ ನಿವಾಸಿ ಸುಲೋಚನಾ ದೇವಿ ಕೂಡ ಆಘಾತದಿಂದ ಹೊರಬಂದಿಲ್ಲ. ‘ಏನು ಹೇಳಬೇಕೋ ತಿಳಿಯುತ್ತಿಲ್ಲ. ಸಂತ್ರಸ್ತರಿಗೆ ಕೂಡಲೇ ನೆರವು ನೀಡಬೇಕು ಎಂದಷ್ಟೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು.

ಈ ಪ್ರಾಕೃತಿಕ ವಿಕೋಪದೀಂದ ಧರಾಲಿಯಲ್ಲಿ ₹300 ಕೋಟಿಯಿಂದ ₹400 ಕೋಟಿಯಷ್ಟು ನಷ್ಟ ಆಗಿರಬಹುದು.
– ಸುರೇಶ್ ಸೆಮ್ವಾಲ್, ಗಂಗೋತ್ರಿ ದೇವಸ್ಥಾನ ಕಮಿಟಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.