ADVERTISEMENT

ಉತ್ತರಾಖಂಡ: ಸುರಂಗ ಕುಸಿದು ಅವಘಡ, 40 ಕಾರ್ಮಿಕರು ಸುರಕ್ಷಿತ

* ಘಟನೆ ಸ್ಥಳಕ್ಕೆ ಮುಖ್ಯಮಂತ್ರಿ ಧಾಮಿ ಭೇಟಿ

ಪಿಟಿಐ
Published 13 ನವೆಂಬರ್ 2023, 13:47 IST
Last Updated 13 ನವೆಂಬರ್ 2023, 13:47 IST
<div class="paragraphs"><p>ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕುಸಿತವಾಗಿರುವ ಸುರಂಗದ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದರು </p></div>

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕುಸಿತವಾಗಿರುವ ಸುರಂಗದ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದರು

   

–ಪಿಟಿಐ ಚಿತ್ರ

ಉತ್ತರಕಾಶಿ: ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿದಿರುವ ನಿರ್ಮಾಣ ಹಂತದ ಸುರಂಗದೊಳಗೆ 40 ಕಾರ್ಮಿಕರು ಸಿಲುಕಿಕೊಂಡು 30 ಗಂಟೆಗಳು ಕಳೆದಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಸಂವಹನವನ್ನೂ ಸಾಧಿಸಲಾಗಿದೆ ಎಂದು ಸರ್ಕಾರ ಸೋಮವಾರ ಹೇಳಿದೆ. 

ADVERTISEMENT

ಇಡೀ ರಾತ್ರಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಅವರನ್ನು ಸುರಕ್ಷಿತವಾಗಿ ಹೊರಗೆ ತರುವ ಮಾರ್ಗದ ನಿರ್ಮಾಣ ಕಾರ್ಯವೂ ನಡೆದಿದೆ. ಅವರಿಗೆ ಆಹಾರ ಹಾಗೂ ನೀರು ಪೂರೈಸಲಾಗಿದೆ ಎಂದು ಸಿಲ್ಕ್ಯಾರಾ ಪೊಲೀಸ್‌ ಠಾಣೆಯ ನಿಯಂತ್ರಣಾ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. 

ಬಳಿಕ ಮಾತನಾಡಿದ ಅವರು, ‘ಸುರಂಗದ ಒಳಗೆ ಸಿಲುಕಿಕೊಂಡಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಆತಂಕಗೊಂಡಿರುವ ಕಾರ್ಮಿಕರ ಕುಟುಂಬದ ಸದಸ್ಯರಿಗೂ ಆತ್ಮಸ್ಥೈರ್ಯ ತುಂಬಲಾಗಿದೆ’ ಎಂದು ತಿಳಿಸಿದರು. 

ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದರು.

ಕಾರ್ಯಾಚರಣೆಗೆ ಅಡ್ಡಿ?: ಸುರಂಗದ ಒಳಗೆ ಮಣ್ಣು ಕುಸಿದು ಬೀಳುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ, ಮಣ್ಣು ಕುಸಿದು ಬೀಳದಂತೆ ಕಾಂಕ್ರೀಟ್ ಸಿಂಪಡಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಎನ್ಎಚ್ಐಡಿಸಿಎಲ್) ನಿರ್ದೇಶಕ ಅಂಶು ಮನೀಶ್ ಖಾಲ್ಕೊ ತಿಳಿಸಿದ್ದಾರೆ. 

‘ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ವಾಕಿಟಾಕಿ ಮೂಲಕ ಅವರ ಜೊತೆ ಹಲವು ಬಾರಿ ಸಂವಹನ ನಡೆಸಲಾಗಿದೆ’  ಎಂದರು. 

ಕುಸಿತವಾಗಿರುವ ನಿರ್ಮಾಣ ಹಂತದ ಸುರಂಗದ ಒಳಗೆ ಸಿಲುಕಿರುವ 40 ಕಾರ್ಮಿಕರ ರಕ್ಷಣೆಗೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿರುವುದು

ಒಡಿಶಾ ಮುಖ್ಯಮಂತ್ರಿ ಆತಂಕ

ಭುವನೇಶ್ವರ: ಉತ್ತರಾಖಂಡದಲ್ಲಿ ಕುಸಿತಗೊಂಡಿರುವ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಸ್ಥಿತಿಯ ಬಗ್ಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸೋಮವಾರ ಆತಂಕ ವ್ಯಕ್ತಪಡಿಸಿದ್ದಾರೆ. 

‘ಕುಸಿತಗೊಂಡಿರುವ ಸುರಂಗದಲ್ಲಿ ಸಿಲುಕಿರುವ ರಾಜ್ಯದ ಐವರು ಸೇರಿದಂತೆ 40 ಕಾರ್ಮಿಕರ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಆತಂಕವಾಗಿದೆ. ಈ ಎಲ್ಲ ಕಾರ್ಮಿಕರ ಸುರಕ್ಷತೆ ಮತ್ತು ಶೀಘ್ರ ರಕ್ಷಣೆಗೆ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ಪೈಕಿ ಐವರು ಒಡಿಶಾ ಮೂಲದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.