ADVERTISEMENT

ಲಸಿಕೆ ಪ್ರಯೋಗಕ್ಕೆ ಒಳಗಾದವರ ಆರೋಗ್ಯದಲ್ಲಿ ವ್ಯತ್ಯಯವಿಲ್ಲ: ಪುಣೆ ಸಂಸ್ಥೆ ಹೇಳಿಕೆ

ಪುಣೆ ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ

ಪಿಟಿಐ
Published 27 ಆಗಸ್ಟ್ 2020, 14:02 IST
Last Updated 27 ಆಗಸ್ಟ್ 2020, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ:'ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ ಸಂಸ್ಥೆಯಲ್ಲಿ ಉತ್ಪಾದಿಸಿದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್‌’– ಕೊರೊನಾ ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆಒಳಪಟ್ಟ ಇಬ್ಬರು ಸ್ವಯಂ ಸೇವಕರ ಆರೋಗ್ಯ ಉತ್ತಮವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ಇಲ್ಲಿನ ಭಾರತಿ ವಿದ್ಯಾಪೀಠದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ32 ವರ್ಷದ ಮತ್ತು 48 ವರ್ಷದ ಇಬ್ಬರು ಸ್ವಯಂ ಸೇವಕರನ್ನು ‘ಕೋವಿಶೀಲ್ಡ್‌’ ಲಸಿಕೆಯಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ ಒಳಪಡಿಸಲಾಯಿತು.ಈ ಇಬ್ಬರು ವ್ಯಕ್ತಿಗಳಿಗೆ ಇನ್ನೊಂದು ತಿಂಗಳ ನಂತರ ಇಷ್ಟೇ ಪ್ರಮಾಣದ ಲಸಿಕೆಯನ್ನು ಕೊಡಲಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

'ಲಸಿಕೆ ನೀಡಿದ ನಂತರ ಮೂವತ್ತು ನಿಮಿಷಗಳವರೆಗೆ ಇಬ್ಬರು ವ್ಯಕ್ತಿಗಳನ್ನು ಗಮನಿಸಲಾಯಿತು. ನಂತರ ಅವರಿಗೆ ಮನೆಗೆ ಹೋಗಲು ಅನುಮತಿ ನೀಡಲಾಯಿತು. ನಮ್ಮ ವೈದ್ಯಕೀಯ ತಂಡದ ಇಬ್ಬರು ಸ್ವಯಂ ಸೇವಕರ ಸಂಪರ್ಕದಲ್ಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ನೋವು, ಜ್ವರ, ಅಲರ್ಜಿ ಅಥವಾ ಇನ್ನಾವುದೇ ಅನಾರೋಗ್ಯ ಕಾಣಿಸಿಕೊಂಡಿಲ್ಲ’ ಎಂದು ಆಸ್ಪತ್ರೆ ಮತ್ತು ಕಾಲೇಜಿನ ಉಪ ನಿರ್ದೇಶಕ ಡಾ. ಜಿತೇಂದ್ರ ಓಸ್ವಾಲ್ ತಿಳಿಸಿದ್ದಾರೆ.‌

ADVERTISEMENT

'ಲಸಿಕೆ ಪ್ರಯೋಗಕ್ಕೆ ಒಳಗಾಗಿರುವ ಇಬ್ಬರಿಗೂ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಸಾಧ್ಯವಾಗುವಂತೆ ಅಗತ್ಯವಿರುವವರ ಫೋನ್‌ ನಂಬರ್‌ಗಳನ್ನು ನೀಡಲಾಗಿದೆ. ನಮ್ಮ ವೈದ್ಯಕೀಯ ತಂಡವೂ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ’ ಎಂದು ಅವರು ಹೇಳಿದರು.

ಒಂದು ತಿಂಗಳ ನಂತರ ಇಬ್ಬರು ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗವನ್ನು ಪುನರಾವರ್ತನೆ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸಂಜಯ್ ಲಾಲ್ವಾನಿ ತಿಳಿಸಿದ್ದಾರೆ. ಮುಂದಿನ ಏಳು ದಿನಗಳಲ್ಲಿ ಒಟ್ಟು 25 ಅಭ್ಯರ್ಥಿಗಳ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತದೆ ಎಂದು ಅವರು ಹೇಳಿದರು.

ಬ್ರಿಟನ್-ಸ್ವೀಡನ್‌ ಫಾರ್ಮಾ ಕಂಪನಿ ಆಸ್ಟ್ರಾ ಝೆನಿಕಾ ಸಹಯೋಗದಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಜೆನ್ನೆರ್‌ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಸಂಭಾವ್ಯ ಯಶಸ್ವಿ ಲಸಿಕೆಯ ದೊಡ್ಡಮಟ್ಟದ ಉತ್ಪಾದನೆಗೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಸೀರಂ ಇನ್‌ಸ್ಟಿಟ್ಯೂಟ್‌ ವಿಶ್ವದ ಅತಿದೊಡ್ಡ ಲಸಿಕಾ ಉತ್ಪಾದಕಾ ಸಂಸ್ಥೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.