ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ ನದಿಗೆ ಕಟ್ಟಲಾಗಿರುವ ಗಂಭೀರ ಸೇತುವೆ ಕುಸಿದ ಸಂದರ್ಭದಲ್ಲಿ ಸಿಲುಕಿಕೊಂಡಿರುವ ಟ್ರಕ್
ಪಿಟಿಐ ಚಿತ್ರ
ವಡೋದರಾ: ಗುಜರಾತಿನ ವಡೋದರಾ ಜಿಲ್ಲೆಯಲ್ಲಿ ನಾಲ್ಕು ದಶಕಗಳಷ್ಟು ಹಳೆಯದಾದ ‘ಗಂಭೀರ’ ಸೇತುವೆ ಕುಸಿತ ಘಟನೆಗೆ ಸಂಬಂಧಿಸಿದಂತೆ ಸ್ಲ್ಯಾಬ್ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
10ರಿಂದ 15 ಮೀಟರ್ ಉದ್ದದ ಸ್ಲ್ಯಾಬ್‌ನಲ್ಲಿನ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜ್ಯ ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಗೆ ಆದೇಶಿಸಿದ್ದಾರೆ.
ಇಲಾಖೆಯ ಹಿರಿಯರು ಮತ್ತು ಖಾಸಗಿ ತಜ್ಞ ಎಂಜಿನಿಯರ್‌ಗಳ ತಂಡವನ್ನು ರಚಿಸುವಂತೆ ಸೂಚಿಸಿರುವ ಸಿ.ಎಂ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವಂತೆ ಹೇಳಿದ್ದಾರೆ. ಅಲ್ಲದೆ ಸೇತುವೆ ಕುಸಿತಕ್ಕೆ ಕಾರಣ ಮತ್ತು ಇತರ ತಾಂತ್ರಿಕ ಮಾಹಿತಿಗಳನ್ನು ಒಳಗೊಂಡ ಪ್ರಾಥಮಿಕ ವರದಿ ಸಲ್ಲಿಸುವಂತೆಯೂ ಅವರು ನಿರ್ದೇಶಿಸಿದ್ದಾರೆ.
ಬುಧವಾರ ರಾತ್ರಿ ಮತ್ತೆ ಇಬ್ಬರು ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ವಿಷ್ಣು ರಾವಲ್ (27), ಮೆರ್ರಾಂ ಹಥಿಯಾ (51) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ
ಈ ಘಟನೆಯಲ್ಲಿ ಒಂಬತ್ತು ಜನರನ್ನು ರಕ್ಷಿಸಲಾಗಿದೆ. ಇವರ ಪೈಕಿ ಗಾಯಗೊಂಡಿದ್ದ 5 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಗುಜರಾತ್ ಮತ್ತು ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದ್ದು ನಿನ್ನೆ ಬೆಳಿಗ್ಗೆ 7.30ರ ಸುಮಾರಿಗೆ ಸೇತುವೆಯ 10ರಿಂದ 15 ಮೀಟರ್ ಉದ್ದದ ಸ್ಲ್ಯಾಬ್ (ಎರಡು ಕಂಬಗಳ ನಡುವಿನ) ಕುಸಿದು, ದುರಂತ ಸಂಭವಿಸಿತ್ತು.
ಸೇತುವೆ ಕುಸಿದ ಪರಿಣಾಮ ಎರಡು ಟ್ರಕ್, ಎರಡು ವ್ಯಾನ್‌ಗಳು, ಒಂದು ಆಟೊರಿಕ್ಷಾ ಮತ್ತು ಒಂದು ದ್ವಿಚಕ್ರ ವಾಹನ ಸೇತುವೆಯಿಂದ ನದಿಗೆ ಉರುಳಿದವು. ಬೀಳುವ ಹಂತದಲ್ಲಿದ್ದ ಇತರ ಎರಡು ವಾಹನಗಳನ್ನು ರಕ್ಷಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ (ವಡೋದರಾ ಗ್ರಾಮೀಣ) ರೋಹನ್ ಆನಂದ್ ಹೇಳಿದ್ದಾರೆ.
ಪರಿಹಾರ ಘೋಷಣೆ: ದುರಂತದಲ್ಲಿ ಮೃತಪಟ್ಟವರ ಕುರಿತು ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50,000 ಪರಿಹಾರವನ್ನು ಪಿಎಂಎನ್‌ಆರ್‌ಎಫ್ ನಿಧಿ ಮೂಲಕ ಘೋಷಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದರ್ ಪಟೇಲ್ ಅವರು, ಮೃತರ ಕುಟುಂಬದವರಿಗೆ ತಲಾ ₹4 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50,000 ಆರ್ಥಿಕ ನೆರವು ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.