ವಡೋದರಾ, (ಗುಜರಾತ್): ವಡೋದರಾ ಜಿಲ್ಲೆಯ ಪಾದರಾ ನಗರದಲ್ಲಿ ಮಹಿಸಾಗರ್ ನದಿಗೆ ನಿರ್ಮಿಸಿದ್ದ ಸೇತುವೆ ಕುಸಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ.
ಸೇತುವೆಯಿಂದ ಬಿದ್ದು ಗಾಯಗೊಂಡು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಐದು ಮಂದಿಯ ಪೈಕಿ ದಹೆವಾನ್ ಗ್ರಾಮದ ನಿವಾಸಿ ನರೇಂದ್ರ ಸಿಂಗ್ ಪರ್ಮಾರ್ (45) ಮೃತಪಟ್ಟಿದ್ದಾರೆ. ನದಿಯಲ್ಲಿ ಮತ್ತಿಬ್ಬರ ಮೃತದೇಹಗಳು ಸಿಕ್ಕಿವೆ.
‘ಗುರುವಾರ ರಾತ್ರಿಯವರೆಗೂ 20 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಸತತ ಮೂರನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ’ ಎಂದು ವಡೋದರ ಜಿಲ್ಲಾಧಿಕಾರಿ ಅನಿಲ್ ಧಮೆಲಿಯಾ ತಿಳಿಸಿದ್ದಾರೆ.
ಉನ್ನತ ಮಟ್ಟದ ಸಮಿತಿ ರಚನೆ: ‘ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ರಾಜ್ಯ ರಸ್ತೆ ಹಾಗೂ ಕಟ್ಟಡ ನಿರ್ಮಾಣಗಳ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, 30 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಸೇತುವೆಯ ಜೋಡಣಾ ಸ್ತಂಭದಲ್ಲಿ ಉಂಟಾದ ಒತ್ತಡದಿಂದ ಮುರಿದುಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಸಚಿವ ಋಷಿಕೇಶ್ ಪಟೇಲ್ ತಿಳಿಸಿದರು.
‘ರಾಜ್ಯದಲ್ಲಿ 7 ಸಾವಿರ ಸೇತುವೆಗಳಿದ್ದು, ಈ ಪೈಕಿ ರಿಪೇರಿ ಮಾಡಬೇಕಾದ ಹಾಗೂ ಹೊಸದಾಗಿ ನಿರ್ಮಾಣ ಮಾಡಬೇಕಾದ ಸೇತುವೆಗಳ ಕುರಿತು ವರದಿ ಪಡೆದು, ಅದರ ಅನ್ವಯ ಸರ್ಕಾರ ಕೈಗೊಳ್ಳಲಿದೆ’ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಎಲ್ಲ ಸೇತುವೆಗಳ ತಪಾಸಣಾ ವರದಿ ಹಾಗೂ ಫಿಟ್ನೆಸ್ ಪ್ರಮಾಣಪತ್ರವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಗುಜರಾತ್‌ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಚವ್ಡಾ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.