
ಕೋಲ್ಕತ್ತ: ‘ಸಂಸತ್ತಿನ ಒಳಗೆ ‘ಜೈ ಹಿಂದ್’ ಮತ್ತು ‘ವಂದೇ ಮಾತರಂ’ ಎಂದು ಹೇಳುವುದನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ ಕೆಲ ಮಾಧ್ಯಮಗಳ ವರದಿ ನೋಡಿದೆ. ಇದು ಕಳವಳಕಾರಿ. ರಾಜ್ಯದ ಅಸ್ಮಿತೆಯನ್ನು ಕುಂದಿಸುವ ಕ್ರಮವೇ ಇದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಶ್ನಿಸಿದರು.
‘ಸಂವಿಧಾನ ದಿನ’ದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ‘ಇದು ನಿಜವೇ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ಇದರ ಸತ್ಯಾಸತ್ಯತೆ ಬಗ್ಗೆ ಸಂಸದರಿಗೆ ಕೇಳುತ್ತೇನೆ’ ಎಂದರು.
‘ವಂದೇ ಮಾತರಂ’ ನಮ್ಮ ರಾಷ್ಟ್ರೀಯ ಗೀತೆ ಎಂಬುದನ್ನು ನಾವು ಮರೆಯಬಾರದು. ಇದನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಹೋರಾಟದಲ್ಲಿ ಬಳಸುತ್ತಿದ್ದರು. ಇದನ್ನು ಮರೆಯುವುದು ಹೇಗೆ? ಬಂಗಾಳದ ಅಸ್ಮಿತೆಯನ್ನು ಹಾಳು ಮಾಡಲು ಹೋರಟಿದ್ದಾರೆಯೇ?’ ಎಂದರು.
‘ಪಶ್ಚಿಮ ಬಂಗಾಳವು ಭಾರತದ ಅವಿಭಾಜ್ಯ ಅಂಗವೇ ಆಗಿದೆ. ಪ್ರಜಾಪ್ರಭುತ್ವ, ಜಾತ್ಯತೀತ, ಏಕತೆ ಮತ್ತು ದೇಶದ ವೈವಿಧ್ಯಕ್ಕಾಗಿ ಬಂಗಾಳವು ಎಂದಿಗೂ ಹೋರಾಟ ನಡೆಸಿದೆ ಎಂಬುದನ್ನು ಹೇಳುವುದಕ್ಕೆ ನಮಗೆ ಹೆಮ್ಮೆ ಇದೆ’ ಎಂದರು. ‘ವಂದೇ ಮಾತರಂ’ ಗೀತೆಯನ್ನು ಪಶ್ಚಮ ಬಂಗಾಳದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು 1870ರಲ್ಲಿ ರಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.