ADVERTISEMENT

48 ಗಂಟೆ ಮಾತ್ರ ಸಚಿವ ಸ್ಥಾನದಲ್ಲಿದ್ದ ವೀರೇಂದ್ರಕುಮಾರ್!

​ಪ್ರಜಾವಾಣಿ ವಾರ್ತೆ
Published 29 ಮೇ 2020, 19:29 IST
Last Updated 29 ಮೇ 2020, 19:29 IST

ತಿರುವನಂತಪುರ: ಗುರುವಾರ ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಎಂ.ಪಿ.ವೀರೇಂದ್ರಕುಮಾರ್‌ ಅವರು ಈ ಹಿಂದೆ ಕೇವಲ 48 ಗಂಟೆಗಳ ಅವಧಿಗೆ ಸಚಿವರಾಗಿದ್ದರು.

ಪಕ್ಷದೊಳಗಿನ ಗುಂಪುಗಾರಿಕೆ, ಲಾಬಿಗಳ ಒತ್ತಡದಿಂದಾಗಿ ಅವರು ಅಧಿಕಾರ ಸ್ವೀಕರಿಸಿದ ಎರಡು ದಿನಗಳ ನಂತರ ಪದವಿಯಿಂದ ಕೆಳಗಿಳಿಬೇಕಾಯಿತು.

1987ರಲ್ಲಿ ವೀರೇಂದ್ರಕುಮಾರ್‌ ಅವರು ವಯನಾಡ ಜಿಲ್ಲೆಯ ಕಲಪಟ್ಟ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸಿಪಿಎಂ ಮುಖಂಡ,ಮುಖ್ಯಮಂತ್ರಿ ಇ.ಕೆ.ನಯನಾರ್‌ ನೇತೃತ್ವದ ಸಂಪುಟದಲ್ಲಿ ಅವರು ಅರಣ್ಯ ಸಚಿವರಾಗಿ 1987ರ ಏಪ್ರಿಲ್‌ 2ರಂದು ಅಧಿಕಾರ ಸ್ವೀಕರಿಸಿದರು.

ADVERTISEMENT

‘ಆದರೆ, ಪ‍ಕ್ಷದ ಮತ್ತೊಂದು ಗುಂಪಿಗೆ ಇದು ಅಪಥ್ಯವಾಯಿತು. ತಮ್ಮ ನಾಯಕ ಎನ್‌.ಎಂ.ಜೋಸೆಫ್‌ ಅವರೇ ಅರಣ್ಯ ಸಚಿವರಾಗಬೇಕು ಎಂದು ಈ ಗುಂಪು ಪಟ್ಟು ಹಿಡಿಯಿತು. ಅಧಿಕಾರ ವಹಿಸಿಕೊಂಡ ತಕ್ಷಣ ಅವರು, ಅರಣ್ಯಗಳಲ್ಲಿ ಮರಗಳನ್ನು ಕಡಿಯುವುದನ್ನು ನಿಷೇಧಿಸಲು ಮುಂದಾದರು. ಇದು ಕೂಡ ಅವರಿಗೆ ಮುಳುವಾಯಿತು’ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಕೆ.ಜಿ.ಪರಮೇಶ್ವರ್‌ ವಿವರಿಸುತ್ತಾರೆ.

‘ಸಚಿವರಾದ ನಂತರ ಸನ್ಮಾನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ತಮ್ಮೂರಿಗೆ ಹೋದರು. ಕಾರ್ಯಕ್ರಮ ಇನ್ನೂ ಮುಗಿದಿರಲಿಲ್ಲ, ದಿಢೀರ್‌ ರಾಜಕೀಯ ಬೆಳವಣಿಗೆಗಳಿಂದಾಗಿ ಅವರು ರಾಜೀನಾಮೆ ನೀಡಬೇಕಾಯಿತು. ಕೆಲವು ಮಾಧ್ಯಮಗಳು ಆಗ ಅವರನ್ನು ‘ಏಕ್‌ ದಿನ್‌ಕಾ ರಾಜಾ’ ಎಂಬುದಾಗಿ ಛೇಡಿಸಿದ್ದವು’ ಎಂದೂ ಅವರು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.