ADVERTISEMENT

ಐಐಎಸ್‌ಸಿ ದಾಳಿ ಅಪರಾಧಿಗೆ ಕೈಕೋಳ– ಈ ಬಗ್ಗೆ ಪ್ರತಿಕ್ರಿಯೆ ನೀಡಿ: ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 20:11 IST
Last Updated 20 ಸೆಪ್ಟೆಂಬರ್ 2018, 20:11 IST
ಐಐಎಸ್ಸಿ
ಐಐಎಸ್ಸಿ   

ನವದೆಹಲಿ: ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲೆ ದಾಳಿ ನಡೆಸಿರುವ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಕೈದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೈಕೋಳ ಹಾಕಿದ್ದರ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕೈದಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಕೈಕೋಳ ಹಾಕಿ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಲಾಗಿದೆ ಎಂಬ ಆರೋಪ ಇದೆ. ಈ ಕುರಿತು ಎರಡು ವಾರಗಳೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದೇವದತ್ತ ಕಾಮತ್‌ ಅವರಿಗೆ ನ್ಯಾಯಮೂರ್ತಿಗಳಾದ ಎಸ್.ಎ. ಬೋಬಡೆ ಹಾಗೂ ಎಲ್.ನಾಗೇಶ್ವರರಾವ್‌ ಅವರಿದ್ದ ಪೀಠ ಸೂಚಿಸಿತು.

2005ರಲ್ಲಿ ಬೆಂಗಳೂರಿನ ಐಐಎಸ್‌ಸಿ ಆವರಣದಲ್ಲಿ ನಡೆದಿದ್ದ ದಾಳಿಯ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ 37 ವರ್ಷ ವಯಸ್ಸಿನ ಮಹಮ್ಮದ್‌ ರಾಜುರ್‌ ರೆಹಮಾನ್‌ ಅಲಿಯಾಸ್‌ ಉಮೇಶ ಉದ್ವಿಗ್ನತೆ, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ ಎಂದು ದೂರಿ ಮೇಲ್ಮನವಿ ಸಲ್ಲಿಸಲಾಗಿದೆ.

ADVERTISEMENT

ಉಮೇಶ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ಏಳು ಜನ ಆರೋಪಿಗಳಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿ ಅಧೀನ ನ್ಯಾಯಾಲಯವು 2011ರಲ್ಲಿ ಆದೇಶ ನೀಡಿತ್ತು. ಆದರೆ, ಹೈಕೋರ್ಟ್‌ 2016ರಲ್ಲಿ ಈ ಶಿಕ್ಷೆಯ ಅವಧಿಯನ್ನು ಹೆಚ್ಚಿಸಿದೆ. ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.