ADVERTISEMENT

ಪತ್ರಕರ್ತ, ಇತಿಹಾಸಕಾರ ಮಾರ್ಕ್‌ ಟುಲ್ಲಿ ಇನ್ನಿಲ್ಲ

ಪಿಟಿಐ
Published 25 ಜನವರಿ 2026, 15:49 IST
Last Updated 25 ಜನವರಿ 2026, 15:49 IST
ಮಾರ್ಕ್‌ ಟುಲ್ಲಿ
ಮಾರ್ಕ್‌ ಟುಲ್ಲಿ   

ನವದೆಹಲಿ: ಪತ್ರಕರ್ತ, ಲೇಖಕ, ಇತಿಹಾಸಕಾರ ಮಾರ್ಕ್‌ ಟುಲ್ಲಿ(90) ಅವರು ಬಹುಅಂಗಾಂಗ ವೈಫಲ್ಯದಿಂದಾಗಿ ಭಾನುವಾರ ನಿಧನರಾದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜನವರಿ 21ರಂದು ದೆಹಲಿಯ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 

1935ರ ಅಕ್ಟೋಬರ್ 24ರಂದು ಕೋಲ್ಕತ್ತದಲ್ಲಿ ಜನಿಸಿದ್ದ ಟುಲ್ಲಿ ಅವರು 22 ವರ್ಷ ಬಿಬಿಸಿ ದೆಹಲಿ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 1974ರಲ್ಲಿ ಬಿಬಿಸಿಯನ್ನು ತೊರೆದ ಟುಲ್ಲಿ, ಬಿಬಿಸಿ ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ‘ಸಮ್‌ಥಿಂಗ್‌ ಅಂಡರ್‌ಸ್ಟುಡ್‌’  ಕಾರ್ಯಕ್ರಮದ ನಿರೂಪಕರಾಗಿದ್ದರು.

ADVERTISEMENT

ಭಾರತ ಮತ್ತು ಬ್ರಿಟಿಷ್‌ ರಾಜರ ಸಾಕ್ಷ್ಯಚಿತ್ರದಿಂದ ಆರಂಭಗೊಂಡು ಭಾರತೀಯ ರೈಲ್ವೆ ಕುರಿತ ಸಾಕ್ಷ್ಯಚಿತ್ರಗಳವರೆಗೆ ಹಲವು ಸಾಕ್ಷ್ಯಚಿತ್ರಗಳ ಭಾಗವಾಗಿ ಟುಲ್ಲಿ ಕೆಲಸ ಮಾಡಿದ್ದರು. ಬಾಂಗ್ಲಾದೇಶದ ಜೊತೆಗಿನ 1971ರ ಯುದ್ಧ, ತುರ್ತು ಪರಿಸ್ಥಿತಿ ಹೇರಿಕೆ ಸೇರಿದಂತೆ ಸ್ವಾತಂತ್ರೋತ್ತರ ಭಾರತದ ಐತಿಹಾಸಿಕ ಘಟನೆಗಳನ್ನು ಟುಲ್ಲಿ ಬಿಬಿಸಿಯಲ್ಲಿ ವರದಿ ಮಾಡಿದ್ದರು.

ಟುಲ್ಲಿ ಬಿಬಿಸಿಯಿಂದ ಹೊರಬಂದ ಬಳಿಕ ಯಾವುದೇ ಸಂಸ್ಥೆ ಸೇರದೆ ಸ್ವತಂತ್ರವಾಗಿ ಕೆಲಸ ಮಾಡಿದರು. ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ವಿಶ್ಲೇಷಿಸುತ್ತಿದ್ದರು.

‘ನೋ ಫುಲ್ ಸ್ಟಾಪ್ಸ್‌ ಇನ್‌ ಇಂಡಿಯಾ’, ‘ಇಂಡಿಯಾ ಇನ್‌ ಸ್ಲೋ ಮೋಷನ್‌’ ಮತ್ತು ‘ದ ಆರ್ಟ್‌ ಆಫ್‌ ಇಂಡಿಯಾ’ ಸೇರಿದಂತೆ ಭಾರತದ ಬಗ್ಗೆ ಹಲವು ಕೃತಿಗಳನ್ನು ಬರೆದಿದ್ದಾರೆ.‌ 

‘ಆಪರೇಷನ್ ಬ್ಲೂ ಸ್ಟಾರ್‌ ಮತ್ತು ಪಂಜಾಬ್‌ ಸಮಸ್ಯೆಗಳ ಕುರಿತಾಗಿ ಬರೆದ ‘ಅಮೃತಸರ: ಮಿ.ಗಾಂಧೀಸ್‌ ಲಾಸ್ಟ್ ಬ್ಯಾಟಲ್‌’ ಪುಸ್ತಕವು ಮೊದಲ ಕೃತಿ.

ಬ್ರಿಟನ್‌ ನೀಡುವ ಅತ್ಯುನ್ನತ ನೈಟ್‌ ಗೌರವವನ್ನು 2002ರಲ್ಲಿ ಪಡೆದ ಟುಲ್ಲಿ, 1992ರಲ್ಲಿ ದೇಶದ ಉನ್ನತ ನಾಗರಿಕ ಪುರಸ್ಕಾರ ಪದ್ಮಶ್ರೀ ಮತ್ತು 2005ರಲ್ಲಿ ಪದ್ಮಭೂಷಣಕ್ಕೆ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.