ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರು
ನವದೆಹಲಿ: ‘ಸೇನೆಯಲ್ಲಿರುವ ಯೋಧರ ನೈತಿಕ ಸ್ಥೈರ್ಯ ಕಾಪಾಡಿಕೊಳ್ಳಬೇಕೆಂದರೆ, ಮಾಜಿ ಯೋಧರ ಪುನರ್ವಸತಿಯನ್ನು ರಕ್ಷಣಾ ಇಲಾಖೆ ನಿರ್ಲಕ್ಷಿಸಬಾರದು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಭಾರತೀಯ ಸೇನೆಯಲ್ಲಿ ಶುಶ್ರೂಷಕಿಯಾಗಿರುವ ಮಹಿಳೆಯ ನೇಮಕಕ್ಕೆ ಆದೇಶಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಯೋಧರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಈ ಅಭಿಪ್ರಾಯಪಟ್ಟಿದೆ.
‘ಸಶಸ್ತ್ರ ಸೇನಾಪಡೆಯಿಂದ ನಿವೃತ್ತರಾದ ನಂತರ, ಅವರು ಸೇನೆ ಸೇರಬಯಸುವ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದ್ದಾರೆ. ನಾಗರಿಕ ಸಮಾಜದಲ್ಲಿ ಮಾಜಿ ಯೋಧರ ಯೋಗದಾನಕ್ಕೆ ಪ್ರಾಮುಖ್ಯತೆ ಇಲ್ಲವೆಂದು ಭಾವಿಸಬಹುದು. ಆದರೆ ಈ ದೇಶದ ಭದ್ರತೆಗೆ ಅಗತ್ಯವಿರುವ ಸೇನೆಗೆ ಯುವ ಸಮುದಾಯವನ್ನು ಪ್ರೇರೇಪಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಇವರಿಂದ ಸಾಧ್ಯ’ ಎಂದು ಪೀಠ ಹೇಳಿದೆ.
‘ಪಂಜಾಬ್ ರಾಜ್ಯದಿಂದ ಸೈನ್ಯದಲ್ಲಿರುವವರ ಒಟ್ಟು ಸಂಖ್ಯೆ 89 ಸಾವಿರವಿದೆ. ದೇಶದ ಜನಸಂಖ್ಯೆಯಲ್ಲಿ ಪಂಜಾಬ್‌ನದ್ದು ಶೇ 2.3ರಷ್ಟಿದೆ. ಆದರೆ ಸೇನೆಯಲ್ಲಿ ಈ ರಾಜ್ಯದವರ ಸಂಖ್ಯೆ ಶೇ 7.7ರಷ್ಟಿದೆ ಎಂಬುದನ್ನು ಗಮದಲ್ಲಿಟ್ಟುಕೊಳ್ಳಬೇಕು’ ಎಂದಿದೆ.
‘ಮಾಜಿ ಯೋಧರ ಪುನರ್ವಸತಿಯನ್ನು ಸಕಾಲಕ್ಕೆ ಕಲ್ಪಿಸುವುದರಿಂದ ಹಾಲಿ ಸೇನೆಯಲ್ಲಿರುವ ಯೋಧರ ಹಾಗೂ ಮುಂದೆ ಸೇರಬಯಸುವ ಆಕಾಂಕ್ಷಿಗಳ ಮನೋಬಲ ಹೆಚ್ಚಲಿದೆ. ಒಂದೊಮ್ಮೆ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಸೇನೆ ಸೇರಬಯಸುವ ಯುವಕರಿಗೆ ಪ್ರೇರಣೆ ಇಲ್ಲದಂತಾಗಲಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.