ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಶುಕ್ರವಾರದಿಂದ ಎರಡು ದಿನ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಘೋಷಿಸಿದೆ.
‘ಬಾಂಗ್ಲಾದೇಶವು ಇಸ್ಲಾಮಿಕ್ ಜಿಹಾದಿಗಳ ಕೈಗೊಂಬೆಯಾಗಿದೆ. ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ವಿಎಚ್‌ಪಿ, ಭಜರಂಗ ದಳ ಸೇರಿದಂತೆ ಎಲ್ಲಾ ಹಿಂದೂ ಸಂಘಟನೆಗಳು ಹಾಗೂ ಮಾನವೀಯತೆಯ ಮೇಲೆ ನಂಬಿಕೆ ಇರುವ ಎಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ತಿಳಿಸಿದರು.
ಒಟ್ಟು 1.70 ಕೋಟಿ ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶದಲ್ಲಿ ಶೇ 8ರಷ್ಟು ಅಲ್ಪಸಂಖ್ಯಾತ ಹಿಂದೂಗಳಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಈವರೆಗೆ ದೇಶದಾದ್ಯಂತ ಹಿಂದೂಗಳ ಮೇಲೆ 200ಕ್ಕೂ ಹೆಚ್ಚು ದಾಳಿ ಅಥವಾ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ.
ಇತ್ತೀಚೆಗೆ ಹಿಂದೂ ಧಾರ್ಮಿಕ ನಾಯಕ ಚಿನ್ಮಯಿ ಕೃಷ್ಣದಾಸ್ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇವರಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತು. ಇದನ್ನು ಖಂಡಿಸಿ ಹಲವೆಡೆ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ.
ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತ ಸಮುದಾಯದ ಜನರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಭಾರತವು ಬಾಂಗ್ಲಾದೇಶವನ್ನು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.