ADVERTISEMENT

ದೆಹಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಲು ವಿಎಚ್‌ಪಿ ಆಗ್ರಹ

ಪಿಟಿಐ
Published 19 ಅಕ್ಟೋಬರ್ 2025, 11:11 IST
Last Updated 19 ಅಕ್ಟೋಬರ್ 2025, 11:11 IST
   

ನವದೆಹಲಿ: ದೆಹಲಿಗೆ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರ ಅವರಿಗೆ ಪತ್ರ ಬರೆದಿದೆ. 

‘ದೆಹಲಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಹೆಸರು ಇಂದ್ರಪ್ರಸ್ಥ. ಅದನ್ನು ರಾಜಧಾನಿಗೆ ಇಡಬೇಕು. ಅಲ್ಲದೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ದೆಹಲಿ ರೈಲ್ವೆ ನಿಲ್ದಾಣಗಳಿಗೂ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಬೇಕು’ ಎಂದು ವಿಎಚ್‌ಪಿ ದೆಹಲಿ ಘಟಕದ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಕುಮಾರ್ ಗುಪ್ತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಎಲ್ಲೆಲ್ಲಿ ಮುಸ್ಲಿಮ್ ಆಕ್ರಮಣಕಾರರ ಸ್ಮಾರಕಗಳಿವೆಯೋ ಅಲ್ಲೆಲ್ಲ ಹಿಂದೂ ನಾಯಕರು, ಋಷಿ–ಮುನಿಗಳು ಹಾಗೂ ಪಾಂಡವರ ಕಾಲದ ಪಾತ್ರಗಳನ್ನು ನೆನಪಿಸಿವಂತಹ ಸ್ಮಾರಕಗಳನ್ನು ನಿರ್ಮಿಸಬೇಕು. ರಾಜಾ ಹೇಮಚಂದ್ರ ವಿಕ್ರಮಾದಿತ್ಯನ ಹೆಸರಿನಲ್ಲಿ ದೊಡ್ಡದೊಂದು ಸ್ಮಾರಕ ನಿರ್ಮಿಸುವುದರ ಜತೆಗೆ ಅದೇ ಹೆಸರಿನಲ್ಲಿ ಸೇನಾ ತರಬೇತಿ ಶಾಲೆಯನ್ನೂ ಸ್ಥಾಪಿಸಬೇಕು ಎಂದು ಪತ್ರದ ಮೂಲಕ ಅವರು ಆಗ್ರಹಿಸಿದ್ದಾರೆ. 

ADVERTISEMENT

ಇತ್ತೀಚೆಗೆ ತಾನು ಆಯೋಜಿಸಿದ್ದ ‘ಇಂದ್ರಪ್ರಸ್ಥ ಪುನರ್‌ಜಾಗರಣ ಸಂಕಲ್ಪ ಸಭೆ’ಯಲ್ಲಿ ಸಂಶೋಧಕರು, ಇತಿಹಾಸಕಾರರು ಹಾಗೂ ಸಾರ್ವಜನಿಕರು ನೀಡಿದ ಶಿಫಾರಸುಗಳನ್ನು ಆಧರಿಸಿ ಈ ಪತ್ರವನ್ನು ಬರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.