ADVERTISEMENT

ಶಬರಿಮಲೆ ವಿವಾದ ದಕ್ಷಿಣದ ಅಯೋಧ್ಯೆ

ಕುಂಭ ಮೇಳದ ಧರ್ಮ ಸಂಸತ್‌ನಲ್ಲಿ ವಿಎಚ್‌ಪಿ, ಆರ್‌ಎಸ್ಎಸ್‌ ಘೋಷಣೆ

ಪಿಟಿಐ
Published 31 ಜನವರಿ 2019, 20:35 IST
Last Updated 31 ಜನವರಿ 2019, 20:35 IST

ಲಖನೌ: ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆಯನ್ನಾಗಿ ಮಾಡಲುವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನಿರ್ಧರಿಸಿವೆ.

ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಗುರುವಾರ ಆರಂಭವಾದ ಧರ್ಮ ಸಂಸತ್‌ನ ಮೊದಲ ದಿನವೇ ಶಬರಿಮಲೆ ವಿವಾದವನ್ನು ಪ್ರಸ್ತಾಪಿಸಿದ ವಿಎಚ್‌ಪಿ ಹಾಗೂ ಆರ್‌ಎಸ್‌ಎಸ್‌, ಹಿಂದೂಗಳನ್ನು ವಿಭಜಿಸಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಆರೋಪಿಸಿವೆ.

ಅಯೋಧ್ಯೆಯ ರಾಮಮಂದಿರಕ್ಕಾಗಿ ನಡೆಸಿದ ಹೋರಾಟದ ಮಾದರಿಯಲ್ಲಿಯೇ ಶಬರಿಮಲೆಗಾಗಿ ಹೋರಾಟ ನಡೆಸಲಾಗುವುದು ಎಂದು ಆರ್‌ಎಸ್‌ಎಸ್‌ ಮಖ್ಯಸ್ಥ ಮೋಹನ್‌ ಭಾಗವತ್‌ ಘೋಷಿಸಿದರು.

ADVERTISEMENT

‘ಶಬರಿಮಲೆ ಪ್ರಕರಣದಲ್ಲಿ ಹಿಂದೂಗಳ ನಂಬಿಕೆಯನ್ನುಸುಪ್ರೀಂ ಕೋರ್ಟ್‌ ಕಡೆಗಣಿಸಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ತೀರ್ಪು ನೀಡಿದೆ. ಹಿಂದೂಗಳ ವಿರುದ್ಧ ಕುಚೋದ್ಯದಿಂದ ಕೂಡಿದ ಹೋರಾಟ ನಡೆಯುತ್ತಿದೆ’ ಎಂದು ಅವರು ಆಪಾದಿಸಿದರು.

‘ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರವೂ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಮಹಿಳೆಯರೇ ಒಪ್ಪುತ್ತಿಲ್ಲ. ದೇವಸ್ಥಾನ ಪ್ರವೇಶಿಸಲು ಯಾವುದೇ ಮಹಿಳೆ ಬಯಸಿದರೆ ಅವಕಾಶ ನೀಡಲಾಗುವುದು. ಹಿಂಬಾಗಿಲಿನಿಂದ ಶ್ರೀಲಂಕಾದ ಮಹಿಳೆಗೆ ಪ್ರವೇಶ ನೀಡಲಾಗಿದೆ’ ಎಂದು ಭಾಗವತ್‌ ಹೇಳಿದರು.

ಶಬರಿಮಲೆ: ಮರುಪರಿಶೀಲನಾ ಅರ್ಜಿಗಳ ವಿಚಾರಣೆ ಫೆ. 6 ರಿಂದ

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಫೆಬ್ರುವರಿ 6ರಿಂದ ಆರಂಭಿಸಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರಿಮನ್‌, ಎ.ಎಂ.ಖಾನ್ವಿಲ್ಕರ್‌, ಡಿ.ವೈ.ಚಂದ್ರಚೂಡ್‌ ಮತ್ತು ಇಂದೂ ಮಲ್ಹೋತ್ರ ಅವರನ್ನೊಳಗಂಡ ಸಂವಿಧಾನ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠವು ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ 2018ರ ಸೆಪ್ಟೆಂಬರ್‌ 28 ರಂದು 4:1 ಅನುಪಾತದಲ್ಲಿತೀರ್ಪು ನೀಡಿತ್ತು. ನಂತರ ಕೇರಳದಲ್ಲಿ ಪ್ರತಿಭಟನೆಗಳುಭುಗಿಲೆದ್ದಿದ್ದವು. ತೀರ್ಪು ಮರುಪರಿಶೀಲಿಸಬೇಕು ಎಂದು 48 ಅರ್ಜಿಗಳುಸಲ್ಲಿಕೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.