ADVERTISEMENT

VP Dhankhar Resignation: ಧನಕರ್ ದಿಢೀರ್ ರಾಜೀನಾಮೆ ಸುತ್ತ ಹಲವು ಅನುಮಾನಗಳು

ಶೆಮಿನ್ ಜಾಯ್‌
Published 22 ಜುಲೈ 2025, 6:24 IST
Last Updated 22 ಜುಲೈ 2025, 6:24 IST
<div class="paragraphs"><p>ಜಗದೀಪ್ ಧನಕರ್</p></div>

ಜಗದೀಪ್ ಧನಕರ್

   

– ಪಿಟಿಐ ಚಿತ್ರ

ನವದೆಹಲಿ: ಜುಲೈ 23ರಂದು ಜೈಪುರಕ್ಕೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ನೂತನವಾಗಿ ಆಯ್ಕೆಯಾಗಿರುವ ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘದ ಒಕ್ಕೂಟದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಸೋಮವಾರ ಮಧ್ಯಾಹ್ನ 3.53ಕ್ಕೆ ಕೇಂದ್ರ ವಾರ್ತಾ ಶಾಖೆ (ಪಿಐಬಿ) ಪ್ರಕಟಣೆಯಲ್ಲಿ ಹೇಳಲಾಗಿತ್ತು.

ADVERTISEMENT

ಇಂದು (ಮಂಗಳವಾರ) ಮಧ್ಯಾಹ್ನ 1 ಗಂಟೆಗೆ ರಾಜ್ಯಸಭಾ ಕಲಾಪ ಸಲಹಾ ಸಮಿತಿಯ ಸಭೆಯನ್ನೂ ನಿಶ್ಚಯಿಸಿದ್ದರು. ಆದರೆ ಸೋಮವಾರ ರಾತ್ರಿ 9.25ಕ್ಕೆ ಭಾರತದ ಉಪರಾಷ್ಟ್ರಪತಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ, ಧನಕರ್ ಅವರು ರಾಜೀನಾಮೆ ನೀಡಿದ್ದಾಗಿ ಪ್ರಕಟವಾಗಿದೆ.

ಆರೋಗ್ಯ ಕಾರಣಗಳನ್ನು ನೀಡಿ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ. ಈ ಹಠಾತ್ ರಾಜೀನಾಮೆ ಘೋಷಣೆಗೂ ಮುನ್ನ, ರಾಜ್ಯಸಭೆಯಲ್ಲಿ 62 ನಿಮಿಷ ಕಲಾಪ ನಡೆಸಿದ್ದಾರೆ. ಹೊಸದಾಗಿ ಆಯ್ಕೆಯಾದ ಐವರು ರಾಜ್ಯಸಭಾ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದರು. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬ ಇದ್ದಿದ್ದರಿಂದ ಸುದೀರ್ಘವಾಗಿ ಅವರ ಬಗ್ಗೆ ಮಾತನಾಡಿ ಶುಭಾಶಯಗಳನ್ನು ತಿಳಿಸಿದ್ದರು. ಕಲಾಪ ಸಲಹಾ ಸಮಿತಿಯ ಸಭೆ ನಡೆಸಿದ್ದರು, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ಸಿನ್ಹಾ ಅವರನ್ನು ವಾಗ್ದಂಡನೆ ನೋಟಿಸ್ ನೀಡಲು ಬಂದ ವಿರೋಧ ಪಕ್ಷಗಳ ಸಂಸದರನ್ನೂ ಧನಕರ್ ಭೇಟಿ ಮಾಡಿದ್ದರು.

74 ವರ್ಷದ ಧನಕರ್ ತಮ್ಮ ರಾಜೀನಾಮೆಗೆ ಆರೋಗ್ಯ ಕಾರಣಗಳನ್ನು ನೀಡಿದ್ದರೂ, ಅವರ ಈ ಹಠಾತ್ ನಿರ್ಗಮನ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಅದರಲ್ಲೂ ಮುಂಗಾರು ಅಧಿವೇಶನದ ಮೊದಲ ದಿನವೇ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಈ ಅನುಮಾನಗಳಿಗೆ ಇನ್ನಷ್ಟು ಪುಷ್ಠಿ ನೀಡಿವೆ.

ಮುಂಗಾರು ಅಧಿವೇಶನ ಆರಂಭವಾಗುವವರೆಗೆ ಧನಕರ್ ಏಕೆ ಕಾಯುತ್ತಿದ್ದರು ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಅಧಿವೇಶನ ಆರಂಭಕ್ಕೂ ಮೊದಲೇ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿತ್ತು. ಈ ಬಗ್ಗೆ ಹಲವು ನಾಯಕರ ಬಳಿ ಕೇಳಿದಾಗಲೂ ಅವರ ಪ್ರತಿಕ್ರಿಯೆಯೂ ಹೀಗೆ ಆಗಿತ್ತು. ಅಲ್ಲದೆ ಮೊದಲ ದಿನದ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಧನಕರ್, ರಾಜ್ಯಸಭೆಯಲ್ಲಿ ಸುಮಾರು 45 ನಿಮಿಷಗಳ ಕಾಲ ಸತತವಾಗಿ ಹಲವು ಶ್ರದ್ಧಾಂಜಲಿ ಹಾಗೂ ಇತರ ನಿರ್ಣಯಗಳನ್ನು ಓದಿದ್ದನ್ನೂ ಅವರು ಉಲ್ಲೇಖಿಸಿದ್ದಾರೆ

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಗದ್ದಲದ ನಂತರ ಶೂನ್ಯ ವೇಳೆಯಿಂದ ಮಧ್ಯಾಹ್ನದವರೆಗೆ ಸದನವನ್ನು ಮುಂದೂಡುವುದಕ್ಕಿಂತ ಮೊದಲು 50 ನಿಮಿಷಗಳ ಕಾಲ ಧನಕರ್ ಅಧ್ಯಕ್ಷತೆ ವಹಿಸಿದ್ದರು. ಸಂಜೆ ಮತ್ತೆ ಮರಳಿದ ಅವರು, ನ್ಯಾಯಮೂರ್ತಿ ವರ್ಮಾ ಅವರ ವಾಗ್ದಂಡನೆಗೆ ವಿರೋಧ ಪಕ್ಷಗಳು ನೀಡಿರುವ ನೋಟಿಸ್ ಬಗ್ಗೆ ಚರ್ಚಿಸಿದ್ದರು.

ಧನಕರ್ ಅವರ ರಾಜೀನಾಮೆ ಅವರ ರಾಜೀನಾಮೆ ನಿರ್ಧಾರವನ್ನು ಆಘಾತಕಾರಿ ಎಂದು ಬಣ್ಣಿಸಿರುವ ರಾಜ್ಯಸಭೆಯಲ್ಲಿನ ಕಾಂಗ್ರೆಸ್‌ನ ಮುಖ್ಯಸಚೇತಕ ಜೈರಾಮ್ ರಮೇಶ್, ‘ಸಂಜೆ 5 ಗಂಟೆಯ ಸುಮಾರಿಗೆ ಧನಕರ್ ಅವರೊಂದಿಗೆ ಹಲವಾರು ಸಂಸದರಿದ್ದರು. ರಾತ್ರಿ 7:30ಕ್ಕೆ ದೂರವಾಣಿಯಲ್ಲಿ ಮಾತನಾಡಿದ್ದರು’ ಎಂದು ಹೇಳಿದ್ದಾರೆ.

‘ಧನಕರ್ ಅವರು ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿವಹಿಸಬೇಕು ಎನ್ನುವುದರ ಬಗ್ಗೆ ಸಂಶಯವಿಲ್ಲ. ಆದರೆ ಈ ದಿಢೀರ್ ರಾಜೀನಾಮೆ ಹಿಂದೆ ಕಣ್ಣಿಗೆ ಗೋಚರಿಸಿದ ಅನಿರೀಕ್ಷಿತ ಕಾರಣಗಳಿವೆ. ಊಹಾಪೋಹಗಳಿಗೆ ಇದು ಸಮಯವಲ್ಲದಿದ್ದರೂ, ನಾಳೆ ಅವರು ನ್ಯಾಯಾಂಗದ ಬಗ್ಗೆ ಪ್ರಮುಖ ಘೋಷಣೆಗಳನ್ನು ಮಾಡುವವರಿದ್ದರು’ ಎಂದು ಜೈರಾಮ್ ರಮೇಶ್ ಹೇಳಿದ್ದರು.

ಧನಕರ್ ಅವರು ಟಿಪ್ಪಣಿ ಮಾಡಲು ಉದ್ದೇಶಿಸಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ರಮೇಶ್ ನೀಡದಿದ್ದರೂ, ಕೋಮುವಾದಿ ಹೇಳಿಕೆಗಳನ್ನು ನೀಡಿರುವ ಆರೋಪ ಹೊತ್ತಿರುವ ಅಲಹಾಬಾದ್ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಶೇಖರ್ ಯಾದವ್ ವಿರುದ್ಧದ ವಾಗ್ದಂಡನೆ ನೋಟಿಸ್ ಅಂಗೀಕರಿಸುವ ಬಗ್ಗೆ ಇರುವ ಊಹಾಪೋಹಗಳು ಇವು.

ನ್ಯಾಯಮೂರ್ತಿ ಯಶವಂತ ಸಿನ್ಹಾ ವಾಗ್ದಂಡನೆ ಸಂಬಂಧ ವಿರೋಧ ಪಕ್ಷಗಳು ನೀಡಿದ ನೋಟಿಸ್ ಅನ್ನು ಧನಕರ್ ಅವರು ಅಂಗೀಕರಿಸಿದ್ದರಿಂದ ಸರ್ಕಾರಕ್ಕೆ ಮುಖಭಂಗವಾಗಿದ್ದು ಕೂಡ ರಾಜೀನಾಮೆಗೆ ಕಾರಣವಾಗಿರಬಹುದು ಎನ್ನುವುದು ಕೆಲವು ನಾಯಕರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.