ADVERTISEMENT

VP polls| ಪಕ್ಷ ನಿಷ್ಠೆಗಿಂತ, ದೇಶದ ಮೇಲಿನ ಪ್ರೀತಿ ಮುಖ್ಯ: ಬಿ.ಸುದರ್ಶನ ರೆಡ್ಡಿ

ಪಿಟಿಐ
Published 7 ಸೆಪ್ಟೆಂಬರ್ 2025, 15:34 IST
Last Updated 7 ಸೆಪ್ಟೆಂಬರ್ 2025, 15:34 IST
‘ಇಂಡಿಯಾ’ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ
‘ಇಂಡಿಯಾ’ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ   

ನವದೆಹಲಿ: ‘ಮತ ಚಲಾಯಿಸುವ ಸಂದರ್ಭದಲ್ಲಿ ಪಕ್ಷ ನಿಷ್ಠೆಯನ್ನು ಬದಿಗಿಟ್ಟು, ದೇಶದ ಮೇಲೆ ನಿಮಗಿರುವ ಪ್ರೀತಿಯನ್ನು ಗಮನದಲ್ಲಿಡಿ’ ಎಂದು ಉಪರಾಷ್ಟ್ರಪತಿ ಚುನಾವಣೆಯ ವಿಪಕ್ಷಗಳ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರು ಸಂಸದರಿಗೆ ಮನವಿ ಮಾಡಿದ್ದಾರೆ.

ಭಾನುವಾರ ಸಂಸದರನ್ನು ಉದ್ದೇಶಿಸಿ ವಿಡಿಯೊ ಸಂದೇಶ ಕಳುಹಿಸಿರುವ ಅವರು, ‘ನನಗಾಗಿ ಬೆಂಬಲ ಕೊಡಿ ಎಂದು ನಿಮ್ಮನ್ನು ಕೇಳುತ್ತಿಲ್ಲ. ನಮ್ಮ ದೇಶವನ್ನು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಎಂದು ವ್ಯಾಖ್ಯಾನಿಸುವ ಮೌಲ್ಯಗಳಿಗೆ ಬೆಂಬಲ ಕೊಡಿ’ ಎಂದು ಕೋರಿದ್ದಾರೆ.

‘ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠೆ ತೋರಿಸಬೇಡಿ. ದೇಶದ ಮೇಲಿನ ಪ್ರೀತಿ ನಿಮ್ಮ ಆಯ್ಕೆಯ ಮೇಲೆ ಪ್ರಭಾವ ಬೀರಬೇಕು. ನಮ್ಮ ಪ್ರಜಾಪ್ರಭುತ್ವ ಗಣರಾಜ್ಯದ ಆತ್ಮವನ್ನು ರಕ್ಷಿಸುವ ನೈತಿಕ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಳಿದ್ದಾರೆ. 

ADVERTISEMENT

‘ಈ ಹುದ್ದೆಯ (ಉಪರಾಷ್ಟ್ರಪತಿ) ಜವಾಬ್ದಾರಿಯನ್ನು ನನಗೆ ವಹಿಸುವ ಮೂಲಕ ನೀವು ಸಂಸದೀಯ ಸಂಪ್ರದಾಯಗಳನ್ನು ರಕ್ಷಿಸಲು ಮತ್ತು ರಾಜ್ಯಸಭೆಯು ಪ್ರಜಾಪ್ರಭುತ್ವದ ನಿಜವಾದ ದೇವಾಲಯವಾಗಿ ನಿಲ್ಲುವಂತೆ ನೋಡಿಕೊಳ್ಳಲು ನೆರವಾಗುವಿರಿ' ಎಂದಿದ್ದಾರೆ.

‘ನೀವು ಚಲಾಯಿಸಲಿರುವ ಮತ ಕೇವಲ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಿಲ್ಲ. ಇದು ದೇಶಕ್ಕೆ ಚೈತನ್ಯ ತುಂಬುವ ಮತ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ವಿನಯದಿಂದ ಮತ್ತು ಬಲುದೊಡ್ಡ ಜವಾಬ್ದಾರಿಯೊಂದಿಗೆ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಎಲ್ಲರೂ ಒಟ್ಟಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸೋಣ ಮತ್ತು ಭವಿಷ್ಯದ ಪೀಳಿಗೆಯ ಮಂದಿ ಹೆಮ್ಮೆ ಪಟ್ಟುಕೊಳ್ಳುವಂತಹ ಪರಂಪರೆಯನ್ನು ನಿರ್ಮಿಸೋಣ’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.