ನವದೆಹಲಿ: ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗಾಗಿ ಚುನಾವಣಾ ಆಯೋಗವು ಇಂದು (ಗುರುವಾರ) ಅಧಿಸೂಚನೆ ಹೊರಡಿಸಿದೆ.
ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರಕಿದೆ.
ಅಧಿಸೂಚನೆಯ ಪ್ರಕಾರ, ಆಗಸ್ಟ್ 21 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 22ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಆಗಸ್ಟ್ 25, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಬಳಿಕ ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದೆ.
ಸಂವಿಧಾನದ ಪ್ರಕಾರ ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಆಯ್ಕೆಯಾಗುವವರು ಐದು ವರ್ಷಗಳ ಪೂರ್ಣಾವಧಿಯನ್ನು ಪಡೆಯುತ್ತಾರೆ.
ಜುಲೈ 21ರಂದು ಆರೋಗ್ಯ ಕಾರಣಗಳನ್ನು ನೀಡಿ ಉಪ ರಾಷ್ಟ್ರಪತಿ ಹುದ್ದಗೆ ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದರು. ಧನಕರ್ ಅವರ ದಿಢೀರ್ ರಾಜೀನಾಮೆ ಬಳಿಕ ಉಪ ರಾಷ್ಟ್ರಪತಿ ಹುದ್ದೆ ಖಾಲಿ ಉಳಿದಿದೆ. ಧನಕರ್ ಅವರ ಅವಧಿ 2027ರವರೆಗೆ ಇತ್ತು.
ಉಪರಾಷ್ಟ್ರಪತಿ ಆಯ್ಕೆಯ ಚುನಾವಣೆಯಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ನಾಮ ನಿರ್ದೇಶನಗೊಂಡ ಸದಸ್ಯರು ಮತದಾನ ಮಾಡಲು ಅವಕಾಶವಿದೆ. ಅದರಂತೆ, ರಾಜ್ಯಸಭೆಯ 233 ಚುನಾಯಿತ ಸದಸ್ಯರು, 12 ನಾಮನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆಯ 543 ಸಂಸದರು ಮತದಾನ ಮಾಡುವ ಅರ್ಹತೆ ಹೊಂದಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.