ಜಗದೀಪ್ ಧನಕರ್
– ಪಿಟಿಐ ಚಿತ್ರ
ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಹಠಾರ್ ರಾಜೀನಾಮೆ ಸಲ್ಲಿಸಿ ಹೊರನಡೆದಿರುವ ಜಗದೀಪ್ ಧನಕರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಆದರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ ವಹಿಸಿದೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಬುಧವಾರ ಸಂಜೆ ನಡೆದ ರಾಜ್ಯಸಭೆಯ ಕಲಾಪ ವ್ಯವಹಾರಗಳ ಸಮಿತಿ ಸಭೆಯಲ್ಲಿ (ಬಿಎಸಿ) ವಿದಾಯ ಕಾರ್ಯಕ್ರಮಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ವಿಚಾರವಾಗಿ ಸರ್ಕಾರ ಮೌನ ವಹಿಸಿದೆ. ಕೇಂದ್ರ ಸಚಿವ, ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಜೆ.ಪಿ. ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ಜೈರಾಮ್ ಬೇಡಿಕೆಯನ್ನು ವಿರೋಧ ಪಕ್ಷಗಳ ಬೇರಾವ ನಾಯಕರೂ ಬೆಂಬಲಿಸಿಲ್ಲ ಎಂದೂ ಹೇಳಲಾಗಿದೆ.
ಅವಧಿಪೂರ್ಣಗೊಳ್ಳಲು ಮೂರು ವರ್ಷಗಳು ಬಾಕಿ ಇರುವಂತೆಯೇ ಹುದ್ದೆ ತೊರದಿರುವ ಧನಕರ್ ಅವರಿಗೆ ಗೌರವಯುತ ವಿದಾಯ ನೀಡಬೇಕು ಎಂಬುದು ಕಾಂಗ್ರೆಸ್ ಒತ್ತಾಯವಾಗಿದೆ. ಹಾಗೆಯೇ, ಧನಕರ್ ಅವರ ಹಠಾತ್ ರಾಜೀನಾಮೆ ಕುರಿತು ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ್ಯಾ. ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ವಿರೋಧ ಪಕ್ಷಗಳ ಸಂಸದರು ಸಹಿ ಹಾಕಿದ್ದ ನೋಟಿಸ್ ಅನ್ನು ಧನಕರ್ ಸೋಮವಾರ (ಜುಲೈ 21ರಂದು) ಸ್ವೀಕರಿಸಿದ್ದರು. ಸರ್ಕಾರದೊಂದಿಗೆ ಚರ್ಚಿಸದೇ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ಕೊಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.