ADVERTISEMENT

₹1,300 ಕೋಟಿ ಮೊತ್ತದ ದೆಹಲಿ ಶಾಲಾ ಕಟ್ಟಡಗಳ ನಿರ್ಮಾಣ ಹಗರಣ: ತನಿಖೆಗೆ ಶಿಫಾರಸು

ಪಿಟಿಐ
Published 25 ನವೆಂಬರ್ 2022, 11:47 IST
Last Updated 25 ನವೆಂಬರ್ 2022, 11:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ದೆಹಲಿ ಸರ್ಕಾರಿ ಶಾಲೆಗಳ ತರಗತಿ ಕಟ್ಟಡಗಳ ನಿರ್ಮಾಣದಲ್ಲಿ ಆಗಿರುವ ಸುಮಾರು ₹1,300 ಕೋಟಿ ಮೊತ್ತದ ಹಗರಣವನ್ನು ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ಜಾಗೃತ ನಿರ್ದೇಶನಾಲಯವು ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿದೆ.

ದೆಹಲಿ ಸರ್ಕಾರದ ಜಾಗೃತ ನಿರ್ದೇಶನಾಲಯವು ಹಗರಣದ ತನಿಖೆಗೆ ಶಿಫಾರಸು ಮಾಡಿರುವ ವರದಿಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ದೆಹಲಿ ಸರ್ಕಾರಿ ಶಾಲೆಗಳ 2,400 ತರಗತಿ ಕೊಠಡಿಗಳನ್ನು ಲೋಕೋ‍ಪಯೋಗಿ ಇಲಾಖೆ ಮೂಲಕ ನಿರ್ಮಾಣ ಮಾಡಿರುವುದರಲ್ಲಿ ಹಲವು ಅಕ್ರಮಗಳು ನಡೆದಿರುವುದನ್ನುಕೇಂದ್ರ ಜಾಗೃತ ಆಯೋಗವು (ಸಿವಿಸಿ) ಪತ್ತೆ ಹಚ್ಚಿ,2020ರ ಫೆ.17ರಂದು ನೀಡಿದ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಅದೇ ತಿಂಗಳು, ಈ ವಿಷಯದ ಬಗ್ಗೆ ತನ್ನ ಅಭಿಪ್ರಾಯಗಳನ್ನು ತಿಳಿಸುವಂತೆ ಸಿವಿಸಿಯು, ದೆಹಲಿ ಸರ್ಕಾರದ ಜಾಗೃತ ನಿರ್ದೇಶನಾಲಯಕ್ಕೆ ವರದಿ ಕಳುಹಿಸಿತ್ತು.

ADVERTISEMENT

‘ಲೆಪ್ಟಿನೆಂಟ್‌ ವಿ.ಕೆ. ಸಕ್ಸೇನಾ ಅವರು ಇದೇ ವರ್ಷದ ಆಗಸ್ಟ್‌ನಲ್ಲಿ ವಿಚಾರಣೆ ವಿಳಂಬದ ಬಗ್ಗೆ ಮುಖ್ಯ ಕಾರ್ಯದರ್ಶಿಯವರನ್ನು ಪ್ರಶ್ನಿಸಿ, ವರದಿ ಸಲ್ಲಿಸಲು ಸೂಚಿಸುವವರೆಗೂ ಜಾಗೃತ ನಿರ್ದೇಶನಾಲಯವು ಆ ವರದಿಯನ್ನುಎರಡೂವರೆ ವರ್ಷಗಳಿಂದ ಕುರ್ಚಿ ಅಡಿ ಹಾಕಿಕೊಂಡು ಕುಳಿತಿತ್ತು’ ಎಂದು ಮೂಲಗಳು ಹೇಳಿವೆ.

ಸುಮಾರು 1,300 ಕೋಟಿಯ ಈ ಹಗರಣದಲ್ಲಿ ಭಾಗಿಯಾಗಿರುವ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಹೊಣೆಯಾಗಿಸಿ, ಕ್ರಮ ಜರುಗಿಸಲು ಜಾಗೃತಿ ನಿರ್ದೇಶನಾಲಯವೂ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.