ADVERTISEMENT

'ಬ್ಯಾಂಕ್‍ಗಳ ಸಾಲ ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ': ವಿಜಯ್ ಮಲ್ಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 9:17 IST
Last Updated 5 ಡಿಸೆಂಬರ್ 2018, 9:17 IST
ವಿಜಯ್ ಮಲ್ಯ (ಕೃಪೆ: ಎಪಿ)
ವಿಜಯ್ ಮಲ್ಯ (ಕೃಪೆ: ಎಪಿ)   

ನವದೆಹಲಿ: ಬ್ಯಾಂಕ್‍ಗಳಿಂದ ಪಡೆದ ಅಸಲು ಸಾಲವನ್ನು ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ ಎಂದು ಮದ್ಯದೊರೆ, ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

ಹಲವು ಬ್ಯಾಂಕ್‍ಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ದೇಶ ಬಿಟ್ಟು ಹೋದ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಭಾರತದ ಅರ್ಜಿ ಬ್ರಿಟನ್ ನ್ಯಾಯಾಲಯದ ಮುಂದಿದೆ.ಈ ಅರ್ಜಿ ವಿಚಾರಣೆಗೆ 5 ದಿನಗಳು ಬಾಕಿ ಉಳಿದಿರುವ ಈ ಹೊತ್ತಲ್ಲಿ ಸರಣಿ ಟ್ವೀಟ್ ಮಾಡಿರುವ ಮಲ್ಯ, ತಾನು ಅಸಲುಸಾಲವನ್ನು ಮರುಪಾವತಿಸಲು ಸಿದ್ಧ ಎಂದಿದ್ದಾರೆ.

ನನ್ನನ್ನು ಹಸ್ತಾಂತರಿಸುವುದು ಮತ್ತು ಸಾಲ ಮರುಪಾವತಿ ಎರಡು ಪ್ರತ್ಯೇಕ ಸಂಗತಿಗಳಾಗಿವೆ.ಅದು ಕಾನೂನು ರೀತಿಯಲ್ಲಿಯೇ ನಡೆಯಲಿ.ಸಾರ್ವಜನಿಕರ ದುಡ್ಡು ಅದು ಪ್ರಮುಖ ಸಂಗತಿ. ನಾನು ಸಾಲ ಪಡೆದಿರುವ ಮೊತ್ತವನ್ನು ಮರು ಪಾವತಿಸಲು ನಾನು ಸಿದ್ಧನಿದ್ದೇನೆ.ಬ್ಯಾಂಕ್ ಮತ್ತು ಸರ್ಕಾರ ಅದನ್ನು ದಯಮಾಡಿ ಸ್ವೀಕರಿಸಬೇಕು ಎಂದು ನಾನು ವಿನಂತಿಸುತ್ತೇನೆ. ಅದನ್ನು ಸ್ವೀಕರಿಸಲು ಸಿದ್ಧವಿಲ್ಲದಿದ್ದರೆ ಕಾರಣವೇನು? ಎಂದು ಮಲ್ಯ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

ವಿಮಾನ ಇಂಧನ ದರ ಏರಿಕೆಯಾಗಿರುವ ಕಾರಣ ವಿಮಾನ ಸಂಸ್ಥೆ ಆರ್ಥಿಕ ಮುಗ್ಗಟ್ಟು ಅನುಭವಿಸಿದೆ. ಕಚ್ಛಾ ತೈಲ ಬ್ಯಾರೆಲ್‍ಗೆ 140 ಡಾಲರ್‌ವರೆಗೆ ದರ ಏರಿಕೆ ಮಾಡಿದಾಗ, ಕಿಂಗ್ ಫಿಷರ್‌ಗೆ ಆರ್ಥಿಕ ಸಮಸ್ಯೆ ಕಂಡು ಬಂತು.ಸಾಲದ ಹೊರೆ ಹೆಚ್ಚಾಯಿತು.ಹಾಗಾಗಿ ಬ್ಯಾಂಕ್ ಸಾಲವೂ ಏರಿಕೆಯಾಗುತ್ತಾ ಬಂತು. ನಾನು ಪಡೆದ ಸಾಲವನ್ನು ಮರು ಪಾವತಿಸಲು ಸಿದ್ಧನಿದ್ದೇನೆ, ಅದನ್ನು ಸ್ವೀಕರಿಸಿ.

ಸಾಲ ಮರುಪಾವತಿ ಮಾಡದೇ ಇರುವ ಮಲ್ಯ ವಿರುದ್ಧ 2016ರಲ್ಲಿ ಬ್ಯಾಂಕ್‍ಗಳು ಕ್ರಮ ತೆಗೆದುಕೊಳ್ಳಲು ಮುಂದಾದ ವೇಳೆ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದರು. ಮಲ್ಯ ಅವರನ್ನು ನಮಗೆ ಹಸ್ತಾಂತರಿಸಬೇಕು ಎಂದು ಕಳೆದ ಫೆಬ್ರುವರಿ ತಿಂಗಳಲ್ಲಿ ಭಾರತ ಬ್ರಿಟನ್‍ಗೆ ಮನವಿ ಮಾಡಿತ್ತು.

ಬ್ಯಾಂಕ್‍ಗೆ ಸಾಲ ಮರುಪಾವತಿ ಮಾಡದೆ ಪರಾರಿಯಾದವ ಎಂದು ರಾಜಕಾರಣಿಗಳೂ, ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ. ಇದೆಲ್ಲವೂ ಸುಳ್ಳು. ನಾನು ಹಣ ಪಾವತಿ ಮಾಡುತ್ತೇನೆ ಎಂದು ಕರ್ನಾಟಕ ಹೈಕೋರ್ಟ್ ನಲ್ಲಿ ಹೇಳಿದ್ದೆ, ಅದು ಯಾಕೆ ಯಾರಿಗೂ ಕೇಳಿಸುವುದಿಲ್ಲ ?

ಮೂರು ದಶಕಗಳಿಂದ ಭಾರತದ ಬಹುದೊಡ್ಡ ಮದ್ಯ ಕಂಪನಿಯನ್ನು ನಿರ್ವಹಿಸಿ ರಾಜ್ಯದ ಖಜಾನೆಗೆ ಸಾವಿರಕೋಟಿಯಷ್ಟು ಹಣ ಸಂಭಾವನೆ ನೀಡಿದ್ದೇನೆ.ಕಿಂಗ್ ಫಿಷರ್ ವಿಮಾನ ಸಂಸ್ಥೆ ಕೂಡಾ ಸಾಕಷ್ಟು ಹಣವನ್ನು ಸಂಭಾವನೆ ನೀಡಿದೆ. ಉತ್ತಮವಾಗಿದ್ದ ವಿಮಾನ ಸಂಸ್ಥೆ ನಷ್ಟವಾಯಿತು. ಆದರೆ ನಾನು ಇನ್ನೂ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸಲು ಸಿದ್ಧವಾಗಿದ್ದೇನೆ, ದಯಮಾಡಿ ಸ್ವೀಕರಿಸಿ ಎಂದಿದ್ದಾರೆ ಮಲ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.