
ಟಿವಿಕೆ ಪಕ್ಷದ ವಿಜಯ್ ರ‍್ಯಾಲಿ (ಸಂಗ್ರಹ ಚಿತ್ರ)
ನಮಕ್ಕಲ್: ‘ರಾಜ್ಯವನ್ನು ಲೂಟಿ ಮಾಡಿರುವ ಡಿಎಂಕೆ ಪಕ್ಷವು, 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ’ ಎಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಆರೋಪಿಸಿದ್ದಾರೆ.
ರಾಜ್ಯದ ಪಶ್ಚಿಮ ಭಾಗದಲ್ಲಿ ಶನಿವಾರ ರ‍್ಯಾಲಿ ನಡೆಸಿ ಅವರು ಮಾತನಾಡಿದರು.
‘ಡಿಎಂಕೆಗೆ ಮತ ಹಾಕಿದರೆ, ಅದು ಬಿಜೆಪಿಗೆ ಮತ ಹಾಕಿದಂತೆಯೇ. ಎಐಎಡಿಎಂಕೆ ಕೂಡಾ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದೊಂದು ಅಪವಿತ್ರ ಮೈತ್ರಿಯಾಗಿದೆ’ ಎಂದು ಟೀಕಿಸಿದ್ದಾರೆ.
ಕೆಲಸದ ದಿನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಶನಿವಾರವಷ್ಟೇ ಪ್ರಚಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದ ವಿಜಯ್, ಅದರಂತೆಯೇ ಕರೂರ್ ಜಿಲ್ಲೆಯ ನಮಕ್ಕಲ್‌ನಲ್ಲಿ ಇಂದು ರ‍್ಯಾಲಿ ನಡೆಸಿದರು. ನೆಚ್ಚಿನ ನಟ ಹಾಗೂ ರಾಜಕಾರಣಿಯನ್ನು ಕಣ್ತುಂಬಿಕೊಳ್ಳಲು ಕಿಕ್ಕಿರಿದು ಜನ ಸೇರಿದ್ದರು. ಯುವಕರು, ಮಹಿಳೆಯರು ಹಾಗೂ ಹಿರಿಯರೂ ಇದರಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಾಗಿ ಪರಿವರ್ತಿಸಲಾದ ವಾಹನದ ಮೇಲೆ ನಿಂತ ವಿಜಯ್, ಜನರತ್ತ ಕೈಬೀಸಿದರು. ಶಾಲಾ ಮಕ್ಕಳನ್ನೂ ಒಳಗೊಂಡು ಇಡೀ ಸಭೆಯೇ ನೆಚ್ಚಿನ ನಟನ ಕಂಡು ಹಿರಿಹಿರಿ ಹಿಗ್ಗಿದರು. ಕೆಲವರು ಪಕ್ಷದ ಬಾವುಟ ಬೀಸಿದರೆ, ಇನ್ನೂ ಕೆಲವರು ಪೋಸ್ಟರ್ ಹಿಡಿದು ಕೂಗಿದರು.
‘ಪೊಲೀಸರ ಸೂಚನೆ ಪಾಲಿಸಿ. ಗರ್ಭಿಣಿಯರು, ವೃದ್ಧರು ಹಾಗೂ ವಿದ್ಯಾರ್ಥಿಗಳು ಮನೆಯಲ್ಲೇ ಇರಿ. ವಿಜಯ್ ಅವರ ಭಾಷಣ ಟಿ.ವಿ.ಯಲ್ಲೂ ಪ್ರಸಾರವಾಗುತ್ತದೆ. ಆಂಬುಲೆನ್ಸ್ ಹಾಗೂ ಇತರ ವಾಹನಗಳಿಗೆ ತೊಂದರೆಯಾಗದಂತೆ ಪಕ್ಷದ ಕಾರ್ಯಕರ್ತರು ಎಚ್ಚರ ವಹಿಸಬೇಕು. ಪಟಾಕಿ ಸಿಡಿಸಬೇಡಿ. ಹದ್ದು ಮೀರಬೇಡಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ’ ಎಂದು ವಿಜಯ್ ಅವರು ಮನವಿ ಮಾಡಿಕೊಂಡರು.
ಜನಸಾಗರ... ವಿಜಯ್ ಅವರನ್ನು ಕಣ್ತುಂಬಿಕೊಳ್ಳಲಿಕ್ಕಾಗಿಯೇ ಅಪಾರ ಜನಸ್ತೋಮ ಜಮಾಯಿಸಿತ್ತು. ನಟನ ಸ್ವಾಗತಕ್ಕಾಗಿ ನಾಮಕ್ಕಲ್ ನವವಧುವಿನಂತೆ ಶೃಂಗಾರಗೊಂಡಿತ್ತು. ಪಟ್ಟಣದ ಬೀದಿಗಳು ಕಿಕ್ಕಿರಿದ ಜನರಿಂದ ತುಂಬಿದ್ದವು. ಆಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದವರು ನೆರೆದಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಾಮಕ್ಕಲ್‌ಗೆ ವಿಜಯ್ ಬರುತ್ತಿದ್ದಂತೆ ಅಭಿಮಾನಿಗಳು ಬೆಂಬಲಿಗರು ಸಂತಸದ ಹೊನಲಿನಲ್ಲಿ ತೇಲಿದರು. ಪಕ್ಷದ ಬಾವುಟ ಬೀಸಿದರು. ಹತ್ತಿರದಿಂದ ತಮ್ಮ ಮೊಬೈಲ್‌ಗಳಲ್ಲಿ ಛಾಯಾಚಿತ್ರ ಕ್ಲಿಕ್ಕಿಸಿದರು. ವಿಡಿಯೊ ಚಿತ್ರೀಕರಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯು ಟಿವಿಕೆ–ಡಿಎಂಕೆ ನಡುವಿನ ಹಣಾಹಣಿ ಆಗಿರಲಿದೆ. ಡಿಎಂಕೆ ತಮಿಳುನಾಡನ್ನು ಲೂಟಿ ಮಾಡುತ್ತಿದ್ದರೆ ಟಿವಿಕೆ ಜನಸಾಮಾನ್ಯರ ಧ್ವನಿಯಾಗಿದೆ.ವಿಜಯ್, ಟಿಎಂಕೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.