ADVERTISEMENT

ವಿಕಾಸ್‌ ದುಬೆಯ ₹150 ಕೋಟಿ ಮೌಲ್ಯದ ಆಸ್ತಿ ಬಗ್ಗೆ ಇ.ಡಿ ತನಿಖೆಗೆ ಎಸ್ಐಟಿ ಶಿಫಾರಸು

ಪಿಟಿಐ
Published 1 ಡಿಸೆಂಬರ್ 2020, 9:17 IST
Last Updated 1 ಡಿಸೆಂಬರ್ 2020, 9:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶ ಸರ್ಕಾರವು ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಚಿಸಿರುವ ವಿಶೇಷ ತನಿಖಾ ತಂಡವು ರೌಡಿಶೀಟರ್‌ ವಿಕಾಸ್‌ ದುಬೆ ಮತ್ತು ಆತನ ಲೆಕ್ಕಿಗನ ₹150 ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್ಪುರದಲ್ಲಿ ವಿಕಾಸ್‌ ದುಬೆ ನಡೆಸಿದ ದಾಳಿಯಲ್ಲಿ 8 ಪೊಲೀಸ್‌ ಅಧಿಕಾರಿಗಳು ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಮೂವರು ಎಸ್‌ಐಟಿ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಈ ವಿಶೇಷ ತನಿಖಾ ತಂಡವು ವಿಕಾಸ್‌ ದುಬೆ ಮತ್ತು ಆತನ ಲೆಕ್ಕಿಗನ ₹150ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ತನಿಖೆಗೆ ಶಿಫಾರಸು ಮಾಡಿದೆ. ಅಲ್ಲದೇ ತನ್ನ ಸಾಮ್ರಾಜ್ಯ ಕಟ್ಟಲು ವಿಕಾಸ್‌ ದುಬೆಗೆ ಸಹಾಯ ಮಾಡಿದ ಗ್ರಾಮಾಭಿವೃದ್ಧಿ, ಆಹಾರ ಮತ್ತು ಕಂದಾಯ ಹಾಗೂ ಪೊಲೀಸ್‌ ಇಲಾಖೆಯ 90 ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಸಲಹೆ ನೀಡಿದೆ.

ADVERTISEMENT

ವಿಕಾಸ್‌ ದುಬೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ, ಅವರಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸರೆಡ್ಡಿ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿದ 3,100 ಪುಟಗಳ ವರದಿಯಲ್ಲಿ ತಿಳಿಸಿದ್ದಾರೆ.

ಕೆಲ ಅಧಿಕಾರಿಗಳು ವಿಕಾಸ್‌ ದುಬೆ ವಿರುದ್ದ ದಾಖಲಾದ ದೂರುಗಳ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಲ್ಲದೆ ಅವರು ದುಬೆಗೆ ಶಸ್ತ್ರಾಸ್ತ್ರ, ಸಿಮ್‌ ಕಾರ್ಡ್‌, ಪಾಸ್‌ಪೋರ್ಟ್‌, ಸುಳ್ಳು ದಾಖಲೆಗಳನ್ನು ಒದಗಿಸಿ ಕೊಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪರವಾನಗಿ ಪಡೆದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಮತ್ತು ಕಾನೂನುಬಾಹಿರವಾಗಿ ಅದನ್ನು ಸಂಗ್ರಹಿಸಲು ವಿಕಾಸ್‌ ದುಬೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.