ಲಖನೌ: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಪರಾರಿಯಾಗಲು ನೆರವಾದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಕಾನ್ಪುರದ ಚೌಬೆಯಾಪುರ್ ಪೊಲೀಸ್ ಠಾಣೆಯ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ಮತ್ತು ಎಸ್‌ಐ ಕೆ.ಕೆ. ಶರ್ಮಾ ಅವರೇ ಬಂಧಿತರು.
ಪೊಲೀಸರು ದಾಳಿ ನಡೆಸುವ ಮಾಹಿತಿಯನ್ನು ವಿನಯ್ ತಿವಾರಿ ಮತ್ತು ಕೆ.ಕೆ. ಶರ್ಮಾ ಮೊದಲೇ ದುಬೆಗೆ ತಿಳಿಸಿದ್ದರು ಎನ್ನಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಕಳೆದ ಗುರುವಾರ ಮಧ್ಯರಾತ್ರಿ ಪೊಲೀಸರು ವಿಕಾಸ್ ದುಬೆ ಬಂಧನಕ್ಕೆ ದಾಳಿ ನಡೆಸಿದ್ದರು. ಆ ವೇಳೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಪೊಲೀಸರು ಹತರಾಗಿದ್ದರು.
ಬಳಿಕ ವಿಕಾಸ್ ದುಬೆ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಈ ಮಧ್ಯೆ, ಹರಿಯಾಣದ ಫರೀದಾಬಾದ್‌ನ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ದುಬೆ ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಪರಾರಿಯಾಗಿರುವುದಾಗಿ ಬುಧವಾರ ವರದಿಯಾಗಿದೆ.
ಬಂಧಿತ ಪೊಲೀಸರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 120ರ (ಪೊಲೀಸರ ಹತ್ಯೆಗೆ ಸಂಚು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಕಾನ್ಪುರದ ಎಸ್‌ಎಸ್‌ಪಿ ದಿನೇಶ್ ಕುಮಾರ್ ಪಿ ತಿಳಿಸಿದ್ದಾರೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.