ಮುಂಬೈ: ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ ಅವರು, ‘ಶಿವಸೇನೆ (ಉದ್ಧವ್ ಬಣ) ಮತ್ತು ಇತರ ವಿರೋಧ ಪಕ್ಷಗಳ ಬೆಂಬಲಿಗರಿಗೆ ತಮ್ಮ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುವುದಿಲ್ಲ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಸಿಂಧುದುರ್ಗ ಜಿಲ್ಲೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಹಾ ವಿಕಾಸ ಆಘಾಡಿ (ಎಂವಿಎ) ಕಾರ್ಯಕರ್ತರಿಗೆ ತಮ್ಮ ಕ್ಷೇತ್ರವು ಅಭಿವೃದ್ಧಿಯಾಗಬೇಕು ಎಂದಿದ್ದರೆ ಬಿಜೆಪಿ ಸೇರ್ಪಡೆಯಾಗಬೇಕು’ ಎಂದು ಹೇಳಿದರು.
‘ಈಗಾಗಲೇ ಎಂವಿಎ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಸೇರಿದ್ದಾರೆ. ಉಳಿದಿರುವವರೂ ಬಿಜೆಪಿ ಸೇರಲು ಪ್ರೋತ್ಸಾಹಿಸುತ್ತೇನೆ. ಆಡಳಿತಾರೂಢ ‘ಮಹಾಯುತಿ’ ಕಾರ್ಯಕರ್ತರು ಮಾತ್ರ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಪಡೆಯುತ್ತಾರೆ. ಎಂವಿಎ ಸದಸ್ಯ ಗ್ರಾಮ ಪಂಚಾಯಿತಿಯ ಸರಪಂಚ್ ಅಥವಾ ಮುಖ್ಯಸ್ಥ ಆಗಿದ್ದರೆ ಆ ಗ್ರಾಮಕ್ಕೆ ಒಂದು ರೂಪಾಯಿ ಅನುದಾನವೂ ಸಿಗುವುದಿಲ್ಲ’ ಎಂದು ಹೇಳಿದರು.
ಈ ಹೇಳಿಕೆಗೆ ವಿಪಕ್ಷಗಳ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಪ್ರಮಾಣ ವಚನ ಸ್ವೀಕರಿಸಿದ್ದು ಮರೆತುಹೋಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಅವರು ರಾಣೆ ಅವರ ಭಾಷಣದ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು, ‘ಒಂದೋ ಅವರು ಪ್ರಮಾಣ ವಚನವನ್ನು ಸರಿಯಾಗಿ ಗಮನಿಸಿ ಓದಿಲ್ಲ ಅಥವಾ ಅವರು ಮರೆತಿರಬಹುದು. ಸಚಿವರೊಬ್ಬರು ಸಂವಿಧಾನವನ್ನು ಈ ರೀತಿ ಹಾಳು ಮಾಡುತ್ತಿದ್ದರೆ, ಸಂವಿಧಾನ ಉಳಿಯಲು ಹೇಗೆ ಸಾಧ್ಯ? ಮುಖ್ಯಮಂತ್ರಿ ತಮ್ಮ ಸಂಪುಟದ ಸಚಿವರಿಗೆ ಎಚ್ಚರಿಕೆ ನೀಡುತ್ತಾರೆ ಎಂದು ನಿರೀಕ್ಷಿಸುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.