ADVERTISEMENT

ಪಶ್ಚಿಮ ಬಂಗಾಳ: ಮೃತ ಬಾಲಕನ ಮನೆಯ ಭೇಟಿಗೆ ಬಿಜೆಪಿ ನಾಯಕರಿಗೆ ತಡೆ

ಪಿಟಿಐ
Published 23 ಸೆಪ್ಟೆಂಬರ್ 2022, 2:33 IST
Last Updated 23 ಸೆಪ್ಟೆಂಬರ್ 2022, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿವುಢಿ, ಬಿರ್‌ಭೂಮ್‌: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಹಾಗೂ ಸಂಸದ ಸುಖಾಂತ ಮಜುಂದಾರ್‌ ಅವರಿಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ 5 ವರ್ಷದ ಮೃತ ಬಾಲಕನ ಮನೆಯ ಕುಟುಂಬ ಸದಸ್ಯರನ್ನು ಭೇಟಿಯಾಗಲು ಗ್ರಾಮಸ್ಥರು ತಡೆಯೊಡ್ಡಿದ್ದಾರೆ.

ಬಿರ್‌ಭೂಮ್‌ ಜಿಲ್ಲೆಯ ಶಾಂತಿನಿಕೇತನ ಪೊಲೀಸ್‌ ಠಾಣಾ ವ್ಯಪ್ತಿಯ ಮೋಲ್ದಂಗ ಗ್ರಾಮದಲ್ಲಿ ಕಾಣೆಯಾಗಿದ್ದ ಐದು ವರ್ಷದ ಬಾಲಕನ ಮೃತದೇಹವು ಆತನ ನೆರೆಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ಕುಪಿತಗೊಂಡ ಗುಂಪೊಂದು ಆ ಮನೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿತ್ತು.

ಮಂಗಳವಾರ ಮೇಲ್ಛಾವಣಿಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಬಾಲಕ ಭಾನುವಾರದಿಂದ ಕಾಣೆಯಾಗಿದ್ದ. ಘಟನೆ ಕುರಿತು ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸಿದೆ.

ADVERTISEMENT

ಮಜುಂದಾರ್‌ ನೇತೃತ್ತವದಲ್ಲಿ ಗುರುವಾರ ಗ್ರಾಮಕ್ಕೆ ಬಂದ ಬಿಜೆಪಿ ನಾಯಕರನ್ನು ದಾರಿ ಮಧ್ಯೆ ಗ್ರಾಮಸ್ಥರು ತಡೆದರು. ಪೊಲೀಸರ ಉಪಸ್ಥಿತಿಯಲ್ಲೇ ಬಿಜೆಪಿ ನಾಯಕರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.

ಬಳಿಕ ಮಜುಂದಾರ್‌ ಸೇರಿದಂತೆ ಇತರ ಪಕ್ಷಗಳ ಕೆಲವು ನಾಯಕರಿಗೂ ಭೇಟಿಗೆ ಅವಕಾಶ ನೀಡಲಾಗಿದೆ.

ನಮ್ಮನ್ನು ತಡೆಯಲು ಪ್ರಯತ್ನಿಸಿದವರ ಹಿಂದೆ ತೃಣಮೂಲ ಕಾಂಗ್ರೆಸ್‌ ಇದೆ. ಅವರಿಗೆ ಸತ್ಯ ಬಹಿರಂಗವಾಗುವುದು ಬೇಕಿಲ್ಲ ಎಂದು ಮಜುಂದಾರ್‌ ಆರೋಪಿಸಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥೆ ಸುದೇಶ್ನಾ ರಾಯ್‌ ಅವರು ಬಾಲಕನ ಮನೆಗೆ ಭೇಟಿ ನೀಡಿದ್ದಾರೆ. ಪೋಷಕರ ಜೊತೆ ಮಾತುಕತೆ ನಡೆಸಿದ್ದಾರೆ.

ದುರ್ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇನೆ. ಮಗನನ್ನು ಕಳೆದುಕೊಂಡ ಪೋಷಕರ ದುಃಖ ಅರ್ಥವಾಗುತ್ತದೆ ಎಂದು ಸುದೇಶ್ನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.