ADVERTISEMENT

ಬಂದ್‌- ಸುಪ್ರೀಂ ಆದೇಶ ಉಲ್ಲಂಘಿಸಿದರೆ ಗಂಭೀರವಾದಿತು– ಕೇರಳ ಹೈಕೋರ್ಟ್‌ ಎಚ್ಚರಿಕೆ

ಪಿಟಿಐ
Published 20 ಅಕ್ಟೋಬರ್ 2021, 8:58 IST
Last Updated 20 ಅಕ್ಟೋಬರ್ 2021, 8:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ರಾಜ್ಯದಲ್ಲಿ ಬಂದ್ ಅಥವಾ ಮುಷ್ಕರವನ್ನು ನಿರ್ಬಂಧಿಸುವಂತೆ ಸುಪ್ರೀಂ ಕೋರ್ಟ್‌ ಮತ್ತು ತಾನು ನೀಡಿರುವ ನಿರ್ದೇಶನಗಳನ್ನು ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಕೇರಳ ಹೈಕೋರ್ಟ್‌, ‘ಆದೇಶ ಉಲ್ಲಂಘಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ‘ ಎಂದು ಎಚ್ಚರಿಕೆ ನೀಡಿದೆ.

ವಿದ್ಯಾರ್ಥಿ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳು ಕರೆ ನೀಡುವ ‘ಶೈಕ್ಷಣಿಕ ಬಂದ್‘ ಗಳು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಉಲ್ಲಂಘನೆ ಎಂಬುದಾಗಿ ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಲೇವಾರಿ ಮಾಡುವಾಗ ಹೈಕೋರ್ಟ್ ಈ ರೀತಿ ಹೇಳಿದೆ.

2018ರಲ್ಲಿ ಕೆಲವು ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಬಂದ್‌ನಿಂದಾಗಿ, ಕೊಲ್ಲಂ ಜಿಲ್ಲೆಯಲ್ಲಿರುವ ಕೊಟ್ಟಾರಕರ, ಪೆರ್ಮುಕುಲಂನಲ್ಲಿನ ಸರ್ಕಾರಿ ಪಿವಿಎಚ್‌ಎಸ್ ಶಾಲೆ ಕೆಲವು ದಿನಗಳವರೆಗೆ ಮುಚ್ಚಬೇಕಾಯಿತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ADVERTISEMENT

ಈ ಕುರಿತು ದೂರು ದಾಖಲಾದ ನಂತರ, ಪೊಲಿಸರು ಶಾಲೆಗೆ ಸಂಬಂಧಿಸಿದವರು, ಪೋಷಕರು ಮತ್ತು ಶಿಕ್ಷಕರನ್ನು ಕರೆದು ಸಭೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದರು. ಇದಾದ ನಂತರ ಇಂಥ ಘಟನೆ ನಡೆದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು.

ರಾಜ್ಯ ಸರ್ಕಾರ ಸಲ್ಲಿಸಿರುವ ಈ ಮಾಹಿತಿಯ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಪ್ರಕರಣದ ಅರ್ಜಿಯನ್ನು ಹಾಗೆ ಉಳಿಸಿಕೊಳ್ಳುವುದಿಲ್ಲ‘ ಎಂದು ಹೇಳಿದೆ. ‘ಈ ಪ್ರಕರಣದಲ್ಲಿನ ಸತ್ಯಾಸತ್ಯತೆ ಮತ್ತು ಸನ್ನಿವೇಶಗಳನ್ನು ಗಮನಿಸುವ ಜೊತೆಗೆ, ಎಲ್ಲಾ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮತ್ತು ಈ ನ್ಯಾಯಾಲಯದ ನಿರ್ದೇಶನವನ್ನು ಅನುಷ್ಠಾನಗೊಳಿಸಬೇಕು. ನ್ಯಾಯಾಲಯ ಹೇಳಿರುವಂತೆ ಭವಿಷ್ಯದಲ್ಲಿ ಇಂಥ ಯಾವುದೇ ದೂರು ಬರದಂತೆ, ನ್ಯಾಯಾಲಯದ ಆದೇಶ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಆದೇಶ ಉಲ್ಲಂಘನೆಯಾದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ‘ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.