ADVERTISEMENT

ಅಯ್ಯಪ್ಪ ದರ್ಶನ ಪಡೆಯದೆ ನಾವು ವ್ರತಾಚಾರಣೆ ಮುಗಿಸುವುದು ಹೇಗೆ?: ರೇಷ್ಮಾ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 6:32 IST
Last Updated 16 ಜನವರಿ 2019, 6:32 IST
ರೇಷ್ಮಾ- ಶಾನಿಲಾ
ರೇಷ್ಮಾ- ಶಾನಿಲಾ   

ಪಂಪಾ: ವ್ರತಾಚಾರಣೆ ಮಾಡಿಯೇ ನಾವು ಅಯ್ಯಪ್ಪ ದರ್ಶನಕ್ಕೆ ಬಂದಿದ್ದು, ಅಯ್ಯಪ್ಪ ದರ್ಶನ ಮಾಡದೇ ನಾವು ವಾಪಸ್ ಹೋಗುವುದಿಲ್ಲ ಎಂದು ಹೇಳಿ ರೇಷ್ಮಾ ಮತ್ತು ಶಾನಿಲಾ ಶಬರಿಮಲೆ ಹತ್ತಿದ್ದರು. ಆದರೆ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಬಲವಂತವಾಗಿ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

ಮಕರ ಜ್ಯೋತಿ ದರ್ಶನದ ನಂತರ ನೆಮ್ಮದಿಯಾಗಿಶಬರಿಮಲೆ ಹತ್ತಬಹುದು ಎಂದು ನಾವು ಇಷ್ಟು ದಿನ ಕಾದಿದ್ದು ಎಂದು ರೇಷ್ಮಾ ನಿಶಾಂತ್ ಹೇಳಿದ್ದಾರೆ.

ಅಲ್ಲಿ ಪ್ರತಿಭಟನಾಕಾರರು ಅಲ್ಪ ಸಂಖ್ಯೆಯಲ್ಲಿದ್ದು, ಅವರನ್ನು ತೆರವುಗೊಳಿಸಿ ನಮ್ಮನ್ನು ಸನ್ನಿಧಾನಕ್ಕೆ ಪೊಲೀಸರು ಕರೆದೊಯ್ಯಬಹುದಾಗಿತ್ತು. ಪ್ರತಿಭಟನಾಕಾರರು ಶರಣಂ ಕೂಗಿದ್ದು ಕೊಲ್ಲಣಂ ಅಪ್ಪಾ (ಕೊಲ್ಬೇಕು ಅಪ್ಪಾ) ಎಂದಾಗಿತ್ತು. ಅವರು ಕಾಪಾಡುತ್ತಿರುವ ದೇವರನ್ನೇ ನಾವು ಕೂಡಾ ನಂಬುತ್ತಿರುವುದು.ನಾಲ್ಕು ತಿಂಗಳಿನಿಂದ ನಾವು ವ್ರತದಲ್ಲಿದ್ದೇವೆ. ಮತ್ತೆ ಸಂಸಾರಕ್ಕೆ ಮರಳಬೇಕಾದರೆ ಮಾಲೆ ತೆಗೆಯಬೇಕು.ಅಯ್ಯಪ್ಪನ ದರ್ಶನ ಪಡೆಯದೆ ಮಾಲೆ ತೆಗೆಯುವುದು ಹೇಗೆ ಎಂದು ಅಯ್ಯಪ್ಪ ಭಕ್ತರೇ ಹೇಳಿಕೊಡಿ ಎಂದಿದ್ದಾರೆ ರೇಷ್ಮಾ.

ನಿಲಯ್ಕಲ್‍ನಿಂದ ನೀಲಿಮಲೆವರೆಗೆ ಯಾರ ಸಹಾಯವೂ ಇಲ್ಲದೆ ತಲುಪಿದ್ದೆವು.ಪಂಪಾವರೆಗೆ ಬಂದದ್ದು ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ. ಅಲ್ಲಿಯವರಗೆ ನಮ್ಮನ್ನು ಯಾರೂ ತಡೆಯಲಿಲ್ಲ.ನಮಗೆ ತಡೆಯೊಡ್ಡುವವರನ್ನು ಸಂಭಾಳಿಸುವುದೇ ದೊಡ್ಡ ಸವಾಲು. ಅವರನ್ನು ತೆರವುಗೊಳಿಸಿ ನಮ್ಮನ್ನು ಶಬರಿಮಲೆಗೆ ಕರೆದೊಯ್ಯಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿ.
ಮಾಲೆ ಧರಿಸಿದ ದಿನದಿಂದ ಇಲ್ಲಿಯವರೆಗೆ ನನಗೆ ಪ್ರಾಣ ಬೆದರಿಕೆಗಳನ್ನು ಕೆಲವರು ಒಡ್ಡುತ್ತಿದ್ದಾರೆ. ಅದರ ಹತ್ತನೇ ಒಂದರಷ್ಟು ಪ್ರತಿಭಟನೆಗಳು ಇಲ್ಲಿ ನಡೆದಿಲ್ಲ, ಅಯ್ಯಪ್ಪನೆಂಬ ಶಕ್ತಿ ಸ್ತ್ರೀ ಪ್ರವೇಶವನ್ನು ವಿರೋಧಿಸಲಾರದು.

ಮಲೆ ಹತ್ತಲು ಆರಂಭಿಸಿದಾಗ ಕೇವಲ ಹತ್ತು ಮಂದಿ ಪ್ರತಿಭಟಿಸಿದ್ದರು ಎಂದಿದ್ದಾರೆ ಶಾನಿಲ ಸಜೇಶ್. ಅವರನ್ನು ಅಲ್ಲಿಂದ ಸರಿಸದೆ ನಮ್ಮನ್ನು ಬಂಧಿಯಾಗಿಟ್ಟರು ಪೊಲೀಸರು. ನೂರು ದಿವಸಗಳಿಂದ ವ್ರತಾಚಾರಣೆ ಮಾಡುತ್ತಿದ್ದೇವೆ, ನಾವು ವ್ರತ ಮುಗಿಸುವುದು ಹೇಗೆ? ಭಕ್ತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶಾನಿಲಾ ಹೇಳಿರುವುದಾಗಿ ಮನೋರಮಾ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.