ADVERTISEMENT

ಜನರನ್ನು ಹಿಂಸಿಸುವುದು ಹಿಂದೂ ಧರ್ಮವಲ್ಲ: ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:05 IST
Last Updated 12 ನವೆಂಬರ್ 2021, 19:05 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ:ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತಗಳ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹರಿಹಾಯ್ದಿದ್ದಾರೆ. ಮುಗ್ಧ ಜನರ ಮೇಲೆ ಹಿಂಸಾಚಾರ ನಡೆಸುವುದು ಹಿಂದೂ ಧರ್ಮ ಅಲ್ಲ. ಆದರೆ ಹಿಂದುತ್ವ ಆ ಕೆಲಸವನ್ನು ಮಾಡುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.

ಮಹಾರಾಷ್ಟ್ರದ ವಾರ್ಧಾದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಕಾಂಗ್ರೆಸ್‌ ಮುಖಂಡ ಸಲ್ಮಾನ್‌ ಖುರ್ಷಿದ್‌ ಅವರು ಹಿಂದುತ್ವ ಬೆಂಬಲಿಗರನ್ನು ಜಿಹಾದಿ ಮೂಲಭೂತವಾದಿಗಳ ಜೊತೆ ಹೋಲಿಸಿರುವುದು ಟೀಕೆಗೆ ಒಳಗಾಗಿರುವ ಬೆನ್ನಲ್ಲೇ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

‘ಕಾಂಗ್ರೆಸ್‌ ಸಿದ್ಧಾಂತವು ಆರ್‌ಎಸ್‌ಎಸ್‌ ಸಿದ್ಧಾಂತಕ್ಕಿಂತ ಹೇಗೆ ಭಿನ್ನ ಎಂದು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತಿಳಿಯಲೇಬೇಕು. ನಮ್ಮ ಸಿದ್ಧಾಂತ ಜೀವಂತವಾಗಿದೆ, ಆದರೆ ಅದನ್ನು ಮರೆಮಾಚಲಾಗಿದೆ. ಕಾಂಗ್ರೆಸ್ಸಿಗನಾಗಿರುವುದು ಎಂದರೆ ಏನು ಎಂದು ನಮ್ಮ ನಾಯಕರು ಮತ್ತು ಕಾರ್ಯಕರ್ತರು ತಿಳಿಯಬೇಕು.ಅದಕ್ಕಾಗಿ ತರಬೇತಿ ನೀಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಪ್ರೀತಿ, ವಿಶ್ವಾಸ, ರಾಷ್ಟ್ರೀಯತಾವಾದವನ್ನು ಒಳಗೊಂಡಿರುವ ಕಾಂಗ್ರೆಸ್‌ನ ಸಿದ್ಧಾಂತವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ದ್ವೇಷಪೂರ್ಣ, ವಿಭಜಕ ಸಿದ್ಧಾಂತವು ಮರೆಮಾಚಿದೆ. ಕಾಂಗ್ರೆಸ್‌ ಈ ದೇಶದ ಸಿದ್ಧಾಂತವನ್ನು ಪಾಲಿಸುತ್ತದೆ. ಕಾಂಗ್ರೆಸ್ ತನ್ನ ಸಿದ್ಧಾಂತವನ್ನುಸಮರ್ಪಕವಾಗಿ ಪ್ರಚುರಪಡಿಸದೇ ಇದ್ದದ್ದು ಮತ್ತು ಹಿಂದುತ್ವ ಪಾಲಿಸುವವರು ದೇಶದ ಮಾಧ್ಯಮವನ್ನು ಮತ್ತು ದೇಶವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಿರುವುದು ಇದಕ್ಕೆ ಕಾರಣವಿರಬಹುದು ಎಂದರು.

‘ಗುರುನಾನಕ್‌ ಅಥವಾ ಕಬೀರ್‌ ಹೇಳಿರುವ ಹಿಂದೂ ಧರ್ಮ ಮತ್ತು ಹಿಂದುತ್ವ ಸಿದ್ಧಾಂತದ ನಡುವೆ ಏನಾದರೂ ಹೋಲಿಕೆ ಇದೆಯೇ? ನಮಗೆ ಗೊತ್ತಿರುವ ಹಿಂದೂ ಧರ್ಮ ಮತ್ತು ಹಿಂದುತ್ವ ಎರಡೂ ಒಂದೇ ಆಗಲು ಸಾಧ್ಯವಿದೆಯೇ?ಬಲಪಂಥೀಯರು ಹೇಳುವಂತೆ ಹಿಂದುತ್ವ ಮತ್ತು ಹಿಂದೂ ಧರ್ಮ ಎರಡೂ ಒಂದೇ ಆಗಿದ್ದರೆ ಏಕೆ ಪ್ರತ್ಯೇಕ ಹೆಸರುಗಳನ್ನು ನೀಡಲಾಗುತ್ತಿತ್ತು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.