ADVERTISEMENT

ರಾಜಸ್ಥಾನ| ಕಳ್ಳತನ ಆರೋಪದಲ್ಲಿ ಇಬ್ಬರು ದಲಿತರಿಗೆ ಥಳಿತ: ವೈರಲ್ ಆಯ್ತು ವಿಡಿಯೊ 

ಪಿಟಿಐ
Published 20 ಫೆಬ್ರುವರಿ 2020, 8:51 IST
Last Updated 20 ಫೆಬ್ರುವರಿ 2020, 8:51 IST
ದಲಿತರ ಪ್ರತಿಭಟನೆ ( ಸಂಗ್ರಹ ಚಿತ್ರ)
ದಲಿತರ ಪ್ರತಿಭಟನೆ ( ಸಂಗ್ರಹ ಚಿತ್ರ)   

ಜೈಪುರ್ : ರಾಜಸ್ಥಾನದ ನಾಗೌರ್ ಜಿಲ್ಲೆಯ ದ್ವಿಚಕ್ರ ವಾಹನ ಶೋರೂಮ್‌ನಲ್ಲಿ ಹಣ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತರ ಮೇಲೆ ಶೋರೂಮ್ ಸಿಬ್ಬಂದಿಗಳು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 5 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಏನಿದು ಘಟನೆ?
ಇಬ್ಬರು ವ್ಯಕ್ತಿಗಳು ಭಾನುವಾರ ಶೋರೂಮ್ ನಿಂದ ಹಣ ಕದಿಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದರು. ಅವರ ಮೇಲೆಶೋರೂಮ್ ಸಿಬ್ಬಂದಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಆ ವೇಳೆ ಚಿತ್ರೀಕರಿಸಿದ ವಿಡಿಯೊ ವೈರಲ್ ಆಗಿದೆ. ವಿಡಿಯೊ ಮೂಲಕ ಘಟನೆ ಬೆಳಕಿಗೆ ಬಂದಿದ್ದುಸಂತ್ರಸ್ತರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪಂಚೋಡಿ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ರಾಜ್‌ಪಾಲ್ ಸಿಂಗ್ ಹೇಳಿದ್ದಾರೆ.

ADVERTISEMENT

ಹಣ ಕದ್ದ ಆರೋಪದಲ್ಲಿ ಇಬ್ಬರು ದಲಿತರ ವಿರುದ್ಧ ಶೋರೂಮ್ ಸಿಬ್ಬಂದಿಗಳು ದೂರು ನೀಡಿದ್ದಾರೆ.
ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಐದು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಹುಲ್ ಖಂಡನೆ:

ರಾಜಸ್ಥಾನದ ನಾಗೌರ್‌ನಲ್ಲಿ ಇಬ್ಬರು ದಲಿತ ಯುವಕರ ಮೇಲೆ ಅಮಾನವೀಯ ಹಲ್ಲೆ ನಡೆಸುತ್ತಿರುವ ವಿಡಿಯೊ ಭಯಾನಕವಾಗಿದೆ. ಈ ಅಪರಾಧವೆಸಗಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕು ಎಂದು ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.