ADVERTISEMENT

ವಿಶಾಖಪಟ್ಟಣ: ಮತ್ತೆ ಅನಿಲ ಸೋರಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2020, 3:44 IST
Last Updated 8 ಮೇ 2020, 3:44 IST
   

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದ ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಮತ್ತೆ ಅನಿಲ ಸೋರಿಕೆಯಾಗಿದೆ.

ರ್ಖಾನೆಯ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 10 ಅಗ್ನಿಶಾಮಕ ವಾಹನಗಳು, 2 ಅನಿಲ ನಿಯಂತ್ರಕಗಳು, 50 ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ADVERTISEMENT

ಈ ಕುರಿತು ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಂದೀಪ್ ಆನಂದ್, ‘ಕಾರ್ಖಾನೆ ಸುತ್ತಲ 2–3 ಕಿ.ಮೀ ಸುತ್ತಳತೆಯಲ್ಲಿ ವಾಸವಾಗಿರುವವರನ್ನು ಸೋರಿಕೆ ಹಿನ್ನೆಲೆಯಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಲು ಆದೇಶಿಸಲಾಗಿದೆ,’ ಎಂದು ಹೇಳಿದರು.

ಕಾರ್ಖಾನೆಯಲ್ಲಿ ಆಗುತ್ತಿರುವ ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಕನಿಷ್ಠ ಇನ್ನೊಂದು ದಿನವಾದರೂ ಬೇಕು ಎಂದು ಸರ್ಕಾರ ತಿಳಿಸಿದೆ.

ಆರ್‌.ಆರ್‌. ವೆಂಕಟಾಪುರಂ ಗ್ರಾಮದಲ್ಲಿರುವ ದಕ್ಷಿಣ ಕೊರಿಯಾದ ಎಲ್‌.ಜಿ. ಕೆಮ್‌ ಕಂಪನಿಯ ಮಾಲೀಕತ್ವದ ಎಲ್‌.ಜಿ. ಪಾಲಿಮರ್ಸ್‌ ಘಟಕದಿಂದ ಗುರವಾರ ನಸುಕಿನ 2.30ರ ಹೊತ್ತಿಗೆ ಸ್ಟೈರೀನ್‌ ಮೊನೊಮರ್‌ ಅನಿಲ ಸೋರಿಕೆ ಸಂಭವಿಸಿತ್ತು. ವಿಷಾನಿಲದ ಪರಿಣಾಮವಾಗಿ ಜನರು ರಸ್ತೆ, ರಸ್ತೆ ಬದಿ, ಚರಂಡಿಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದೃಶ್ಯ ಮನ ಕಲಕುವಂತಿತ್ತು. ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಅನಿಲ ಸೋರಿಕೆಯಿಂದ ಸುಮಾರು ಸಾವಿರ ಮಂದಿ ಅಸ್ವಸ್ಥರಾಗಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗುವೂ ಸೇರಿದೆ. ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದ ಇಬ್ಬರು ಚರಂಡಿಗೆ ಬಿದ್ದು ಸತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.