
ವಿ.ಕೆ.ಶಶಿಕಲಾ
ರಾಮನಾಥಪುರ(ತಮಿಳುನಾಡು): ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುವುದು ಹಾಗೂ ಪಕ್ಷದ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು, ಎಐಎಡಿಎಂಕೆ ಪರಮೋಚ್ಚ ನಾಯಕಿಯಾಗಿದ್ದ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಮಂಗಳವಾರ ಘೋಷಿಸಿದ್ದಾರೆ.
ಸಮೀಪದ ಕಮುದಿಯಲ್ಲಿ ಹಮ್ಮಿಕೊಂಡಿದ್ದ ಜಯಲಲಿತಾ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯ ರಾಜಕೀಯದಲ್ಲಿ ನಾವು ಹೊಸ ಅಧ್ಯಾಯ ಆರಂಭಿಸಲಿದ್ದೇವೆ’ ಎಂದರು.
‘ಹೊಸ ಪಕ್ಷದ ಹೆಸರನ್ನು ಶೀಘ್ರವೇ ಘೋಷಿಸಲಾಗುವುದು. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ವಿರೋಧಿಗಳನ್ನು ಹಾಗೂ ದ್ರೋಹ ಬಗೆದವರನ್ನು ಸೋಲಿಸುವುದೇ ನೂತನ ಪಕ್ಷದ ಗುರಿ’ ಎಂದು ಹೇಳಿದರು.
ಇದರೊಂದಿಗೆ, ಬರುವ ಏಪ್ರಿಲ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಸಾಧ್ಯತೆ ಹೆಚ್ಚಾಗಿದೆ. ಡಿಎಂಕೆ ನೇತೃತ್ವದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’, ಎಐಎಡಿಎಂಕೆ ನೇತೃತ್ವದ ಎನ್‌ಡಿಎ, ನಟ ವಿಜಯ್ ಅವರ ಟಿವಿಕೆ ಪಕ್ಷವಲ್ಲದೇ, ಶಶಿಕಲಾ ಅವರ ನೂತನ ಪಕ್ಷದಿಂದಾಗಿ ಈ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ.
ಅನಾವರಣ: ಉದ್ದೇಶಿತ ರಾಜಕೀಯ ಪಕ್ಷದ ಬಾವುಟವನ್ನು ಶಶಿಕಲಾ ಅವರು ಇದೇ ವೇಳೆ ಅನಾವರಣಗೊಳಿಸಿದರು.
ದ್ರಾವಿಡ ನಾಯಕರಾದ ಸಿ.ಎನ್.ಅಣ್ಣಾದೊರೈ, ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಹಾಗೂ ಜಯಲಲಿತಾ ಅವರ ಚಿತ್ರಗಳನ್ನು ಈ ಬಾವುಟ ಒಳಗೊಂಡಿದೆ. ಮೇಲ್ಭಾಗದಲ್ಲಿ ಕಪ್ಪು, ಮಧ್ಯದಲ್ಲಿ ಬಿಳಿ ಹಾಗೂ ಅದರ ಕೆಳಗೆ ಕೆಂಪು ಬಣ್ಣ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.