ರಾಹುಲ್ ಗಾಂಧಿ, ಚುನಾವಣಾ ಆಯೋಗ
ನವದಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಆರೋಪ ಘೋಷಣೆಗೆ ಸಹಿ ಹಾಕಬೇಕು. ಇಲ್ಲವೇ ದೇಶದ ಜನರೆದುರು ಕ್ಷಮೆ ಕೋರಬೇಕು ಎಂದು ಚುನಾವಣಾ ಆಯೋಗದ ಮೂಲಗಳು ಶುಕ್ರವಾರ ಪ್ರತಿಕ್ರಿಯಿಸಿವೆ.
ತಮ್ಮ ವಿಶ್ಲೇಷಣೆ ಸತ್ಯವೆಂದು ಮತ್ತು ಆಯೋಗದ ವಿರುದ್ಧದ ಆರೋಪಗಳು ನಿಜವೆಂದು ರಾಹುಲ್ ಗಾಂಧಿ ಅವರು ಭಾವಿಸಿದ್ದರೆ, ತಮ್ಮ ಘೋಷಣೆಗೆ ನಿಯಮಗಳ ಆಧಾರದಲ್ಲಿ ಸಹಿ ಹಾಕಲು ಹಾಗೂ ಮತದಾರರ ಪಟ್ಟಿಗೆ ತಪ್ಪಾಗಿ ಸೇರಿಸಲಾಗಿರುವ ಅಥವಾ ಕೈಬಿಟ್ಟಿರುವ ಹೆಸರುಗಳ ವಿವರ ನೀಡಲು ಹಿಂಜರಿಯಬಾರದು ಹೇಳಿವೆ.
ಒಂದು ವೇಳೆ ರಾಹುಲ್ ಗಾಂಧಿ ಅವರು ತಮ್ಮ ಘೋಷಣೆಗೆ ಸಹಿ ಹಾಕದಿದ್ದರೆ, ವಿಶ್ಲೇಷಣೆ ಮೇಲೆ ಅವರಿಗೇ ನಂಬಿಕೆ ಇಲ್ಲ ಎಂದರ್ಥ. ಹಾಗಾದಲ್ಲಿ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿವೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್, ಮೂರು ರಾಜ್ಯಗಳಲ್ಲಿ ಮತಗಳ್ಳತನವಾಗಿದೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ಹಾಗೂ ಅಗತ್ಯ ಕ್ರಮ ಆರಂಭಿಸುವುದಕ್ಕಾಗಿ ತಾವು ಸಹಿ ಮಾಡಿದ ಘೋಷಣೆಯನ್ನು ಆಯೋಗದೊಂದಿಗೆ ಹಂಚಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳು ರಾಹುಲ್‌ಗೆ ಕೇಳಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್, ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಂಡು ಮತಗಳ್ಳತನದ ಆರೋಪ ಮಾಡಿದ್ದರು. ಅದಕ್ಕೆ ಪೂರಕವಾಗಿ ದಾಖಲೆಗಳನ್ನೂ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.