ADVERTISEMENT

ಮತ ಕಳವು ವಿರುದ್ಧ ಅಭಿಯಾನ:ಜನ ಬೆಂಬಲ ಗಿಟ್ಟಿಸಲು ಕಾಂಗ್ರೆಸ್‌ನಿಂದ ವೆಬ್‌ ಪೋರ್ಟಲ್

ಪಿಟಿಐ
Published 10 ಆಗಸ್ಟ್ 2025, 15:40 IST
Last Updated 10 ಆಗಸ್ಟ್ 2025, 15:40 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ಮತ ಕಳ್ಳತನ’ದ ವಿರುದ್ಧ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್, ಜನರ ಬೆಂಬಲ ಪಡೆಯಲು ಡಿಜಿಟಲ್‌ ಅಭಿಯಾನಕ್ಕೆ ಚಾಲನೆ ನೀಡಿದೆ. ಇದಕ್ಕಾಗಿ ಪ್ರತ್ಯೇಕ ವೆಬ್‌ ಪೋರ್ಟಲ್‌ ಆರಂಭಿಸಿದೆ.

ಈ ಬಗ್ಗೆ ಭಾನುವಾರ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ‘ಮತ ಕಳ್ಳತನ’ ಎಂಬುದು ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ಪ್ರಜಾಪ್ರಭುತ್ವದ ಮೂಲತತ್ವದ ಮೇಲಿನ ದಾಳಿಯಾಗಿದೆ’ ಎಂದು ಹೇಳಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ‘ದೋಷರಹಿತ ಮತದಾರರ ಪಟ್ಟಿ ಅತ್ಯಗತ್ಯ’ ಎಂದು ಪ್ರತಿಪಾದಿಸಿದ್ದಾರೆ.

‘ಚುನಾವಣಾ ಆಯೋಗದ ಮುಂದಿಟ್ಟಿರುವ ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಪಾರದರ್ಶಕತೆಯನ್ನು ತೋರಿಸಿ ಮತ್ತು ಡಿಜಿಟಲ್ ಸ್ವರೂಪದಲ್ಲಿ ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ. ಇದರಿಂದ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ಪಟ್ಟಿಯನ್ನು ಸ್ವತಃ ಪರಿಶೀಲನೆ ನಡೆಸಬಹುದು’ ಎಂದು ಅವರು ಹೇಳಿದ್ದಾರೆ.

ADVERTISEMENT

ಪಕ್ಷವು ಆರಂಭಿಸಿರುವ votechori.in/ecdemand  ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ಬೇಡಿಕೆಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ‘ಇದು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ’ ಎಂದು ಅವರು ಹೇಳಿದರು.

ವೆಬ್‌ ಪೋರ್ಟಲ್‌ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ಸೂಚಿಸಬಹುದು. ಬಿಜೆಪಿ ಮತ್ತು ಚುನಾವಣಾ ಆಯೋಗವು ಜತೆಯಾಗಿ ಲೋಕಸಭೆ ಚುನಾವಣೆಯಲ್ಲಿ ‘ಮತ ಕಳ್ಳತನ’ ಮಾಡಿವೆ ಎಂದು ರಾಹುಲ್‌ ಅವರು ಆರೋಪಿಸಿರುವ ವಿಡಿಯೊವನ್ನು ಸಹ ವೆಬ್‌ ಪೋರ್ಟಲ್‌ ಹೊಂದಿದೆ.

ಒಬ್ಬ ವ್ಯಕ್ತಿಯು ಪೋರ್ಟಲ್‌ನಲ್ಲಿ ನೋಂದಾಯಿಸಿದರೆ ಅವರ ಹೆಸರಿನಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ‘ವೋಟ್‌ ಚೋರಿ’ಯನ್ನು (ಮತ ಕಳ್ಳತನ) ವಿರೋಧಿಸುತ್ತೇನೆ’ ಎಂದು ಆ ಪ್ರಮಾಣಪತ್ರದಲ್ಲಿ ಬರೆಯಲಾಗಿದೆ.

‘ಚುನಾವಣಾ ಆಯೋಗವು ಡಿಜಿಟಲ್ ಮತದಾರರ ಪಟ್ಟಿಯನ್ನು ನೀಡುವಂತೆ ರಾಹುಲ್‌ ಗಾಂಧಿ ಅವರು ಮಾಡಿರುವ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಪೋರ್ಟಲ್‌ನಲ್ಲಿ ನೀಡಿರುವ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಎಸ್‌ಎಂಎಸ್‌ ಮೂಲಕ ಲಿಂಕ್‌ ಪಡೆದು ಭರ್ತಿ ಮಾಡುವ ಆಯ್ಕೆಯನ್ನೂ ನೀಡಲಾಗಿದೆ. 

ಪ್ರಮಾಣಪತ್ರವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಅಜಯ್ ಮಾಕನ್ ಅವರ ಸಹಿಗಳನ್ನು ಹೊಂದಿದೆ. ಕಾಂಗ್ರೆಸ್‌ನ ಹಲವು ನಾಯಕರು ಮತ್ತು ಬೆಂಬಲಿಗರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ತಾವು ಪಡೆದ ಪ್ರಮಾಣಪತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ದಾಖಲೆ ಒದಗಿಸಿ; ರಾಹುಲ್‌ಗೆ ನೋಟಿಸ್‌

ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ರಾಹುಲ್‌ ಗಾಂಧಿ ಅವರಿಗೆ ಭಾನುವಾರ ನೋಟಿಸ್‌ ಜಾರಿ ಮಾಡಿದ್ದಾರೆ. ದಾಖಲೆಗಳನ್ನು ಒದಗಿಸಿದರೆ ಚುನಾವಣಾ ಆಯೋಗವು ವಿವರವಾದ ತನಿಖೆ ನಡೆಸಲು ನೆರವಾಗಲಿದೆ ಎಂದು ಹೇಳಿದ್ದಾರೆ. ‘ಮತ ಕಳ್ಳತನ’ ಆರೋಪಿಸಿ ಕಳೆದ ವಾರ ನವದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಅವರು ಕೆಲವು ದಾಖಲೆಗಳನ್ನು ತೋರಿಸಿದ್ದರು.

‘ಚುನಾವಣಾಧಿಕಾರಿ ನೀಡಿದ ದಾಖಲೆಗಳ ಪ್ರಕಾರ ಶಕುನ್ ರಾಣಿ ಎಂಬವರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ನೀವು ಆರೋಪಿಸಿರುವಂತೆ ಶಕುನ್ ರಾಣಿ ಅವರು ಎರಡು ಬಾರಿ ಅಲ್ಲ ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂಬುದು ಪರಿಶೀಲನೆ ವೇಳೆ ನಮಗೆ ತಿಳಿದುಬಂದಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. 

ಪತ್ರಿಕಾಗೋಷ್ಠಿಯಲ್ಲಿ ನೀವು ತೋರಿಸಿದ ‘ಟಿಕ್‌ ಮಾರ್ಕ್‌’ ಮಾಡಿರುವ ದಾಖಲೆಯನ್ನು ಚುನಾವಣಾಧಿಕಾರಿ ನೀಡಿಲ್ಲ ಎಂಬುದು ಆಯೋಗ ನಡೆಸಿರುವ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಉಲ್ಲೇಖಿಸಲಾಗಿದೆ.  ‘ಆದ್ದರಿಂದ ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದರೆ ನಾವು ವಿಸ್ತೃತ ತನಿಖೆ ನಡೆಸಬಹುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಇನ್ನಷ್ಟು ಕ್ಷೇತ್ರಗಳಲ್ಲಿ ಪರಿಶೀಲನೆ’

ಕಳೆದ ಲೋಕಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಪಕ್ಷ ಸಮಗ್ರ ಪರಿಶೀಲನೆಯನ್ನು ಪ್ರಾರಂಭಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಭಾನುವಾರ ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು 50 ಸಾವಿರಕ್ಕಿಂತ ಕಡಿಮೆ ಮತಗಳಿಂದ ಸೋತ 48 ಕ್ಷೇತ್ರಗಳಿದ್ದು ಅವೆಲ್ಲದರಲ್ಲೂ ಪಕ್ಷವು ವ್ಯಾಪಕ ಪರಿಶೀಲನೆ ನಡೆಸಲಿದೆ ಎಂದಿದ್ದಾರೆ. ಆಲಪ್ಪುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರಧಾನಿ ನರೇಂದ್ರ ಮೋದಿ ನಿಜವಾದ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳನ್ನು ಪುರಾವೆಗಳೊಂದಿಗೆ ಬಿಡುಗಡೆ ಮಾಡಿದ ನಂತರ ಇದು ಸ್ಪಷ್ಟವಾಯಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.