
ಬ್ರೆಜಿಲ್ ರೂಪದರ್ಶಿ ಲಾರಿಸ್ಸಾ ಹಾಗೂ ಅವರ ಫೋಟೊವನ್ನು ತೋರಿಸುತ್ತಿರುವ ರಾಹುಲ್ ಗಾಂಧಿ (ಬಲ ಚಿತ್ರ)
ಹರಿಯಾಣ ವಿಧಾನಸಭೆಗೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಮತಗಳ್ಳತನ ನಡೆಸಲು ಬ್ರೆಜಿಲ್ ರೂಪದರ್ಶಿಯ ಫೋಟೊವನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದರು. ಅದರ ಬೆನ್ನಲ್ಲೇ, ರೂಪದರ್ಶಿ ಲಾರಿಸ್ಸಾ ಎಂಬವರ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಹಿಂದಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಲು ಚುನಾವಣಾ ಆಯೋಗ ನೆರವಾಗಿದೆ ಎಂದು ಸತತವಾಗಿ ಆರೋಪ ಮಾಡುತ್ತಿರುವ ರಾಹುಲ್, ಬಿಹಾರ ವಿಧಾನಸಭಾ ಚುನಾವಣೆಯ ಮುನ್ನಾದಿನ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಎಲ್‌ಇಡಿ ಪರದೆಯ ಮೇಲೆ ಮಹಿಳೆಯೊಬ್ಬರ ಚಿತ್ರವನ್ನು ಪ್ರಕಟಿಸಿ, 'ಇವರು ಯಾರು?' ಎಂದು ಅಲ್ಲಿದ್ದ ಪತ್ರಕರ್ತರನ್ನು ಕೇಳಿದ್ದರು. ಬಳಿಕ, ಹರಿಯಾಣದ ರಾಯ್ ವಿಧಾನಸಭಾ ಕ್ಷೇತ್ರದ 10 ಮತಗಟ್ಟೆಗಳಲ್ಲಿನ ಮತದಾರರ ಪಟ್ಟಿಯಲ್ಲಿ 22 ಬಾರಿ ಕಾಣಿಸಿಕೊಂಡಿರುವ ಆ ಮಹಿಳೆ ಬ್ರೆಜಿಲ್‌ನ ರೂಪದರ್ಶಿ. ಅವರ ಫೋಟೊವನ್ನು ಸೀಮಾ, ಸ್ವೀಟಿ, ಸರಸ್ವತಿ ಎಂಬಿತ್ಯಾದಿ ಹೆಸರುಗಳಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದರು.
ಮುಂದುವರಿದು, 'ಇಂತಹ ವ್ಯವಸ್ಥಿತ ದುಷ್ಕೃತ್ಯದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ತಳಹದಿಯನ್ನೇ ನಾಶ ಮಾಡಲು ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕೈಜೋಡಿಸಿದೆ' ಎಂದು ದೂರಿದ್ದರು.
ವಿಡಿಯೊ ಹಂಚಿಕೊಂಡ ಲಾರಿಸ್ಸಾ
ತಮ್ಮ ಫೋಟೊವನ್ನು ಭಾರತದ ಮತದಾರರ ಪಟ್ಟಿಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನುವ ಕುರಿತು ಲಾರಿಸ್ಸಾ ಅವರು ವಿಡಿಯೊ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡಿರುವ ಲಾರಿಸ್ಸಾ, ತಮಗೆ 18 ಅಥವಾ 20 ವರ್ಷವಿದ್ದಾಗ ತೆಗೆದ ಚಿತ್ರ ಅದು. ಅದನ್ನು ಭಾರತದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಈಗ ಏಕೆ ಬಳಸಲಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
'ಜನರನ್ನು ವಂಚಿಸುವುದಕ್ಕಾಗಿ ನನ್ನನ್ನು ಭಾರತೀಯಳು ಎಂಬಂತೆ ಕೆಲವರು ಚಿತ್ರಿಸಿದ್ದಾರೆ. ಇದೆಂಥಾ ಹುಚ್ಚಾಟ! ಎಂತಹ ತಿಳಿಗೇಡಿತನ? ನಾವು ಯಾವ ರೀತಿಯ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.