
ಚೆನ್ನೈ: ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಮುಂದಿನ ವಾರದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಆರಂಭಿಸುವುದಾಗಿ ಚುನಾವಣಾ ಆಯೋಗ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ಈ ಸಂಬಂಧ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಎಐಎಡಿಎಂಕೆಯನ್ನು ಮುಖ್ಯಮಂತ್ರಿ ಸ್ಟಾಲಿನ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಜನರಿಂದ ಮತದಾನದ ಹಕ್ಕನ್ನು ಕಸಿಯುವ ಮೂಲಕ ಎಸ್‌ಐಆರ್ ಬಳಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ–ಅಣ್ಣಾಡಿಎಂಕೆ ಯೋಜಿಸಿವೆ ಎಂದು ಕಿಡಿಕಾರಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್ ಮುಂದಿನ ವಾರದಿಂದ ತಮಿಳುನಾಡಿನಲ್ಲಿ ಎಸ್‌ಐಆರ್ ನಡೆಸುವ ಕುರಿತಂತೆ ಚುನಾವಣಾ ಆಯೋಗದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಬಿಹಾರದಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧ ಪಕ್ಷಗಳಿಂದ ಭಾರಿ ಟೀಕೆಗೆ ಒಳಗಾಗಿತ್ತು. ಇದನ್ನು ಮತಕಳ್ಳತನ ಎಂದು ಕಾಂಗ್ರೆಸ್ ಕರೆದಿತ್ತು. ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರೆ ನಡೆಸಿತ್ತು. ಎಸ್‌ಐಆರ್ ಬಳಿಕ ಬೀಹಾರದಲ್ಲಿ 65 ಲಕ್ಷ ಮಂದಿ ತಮ್ಮ ಮತದಾನದ ಹಕ್ಕು ಕಳೆದುಕೊಂಡರು.
ತಮಿಳುನಾಡಿನಲ್ಲೂ ಚುನಾವಣಾ ಲಾಭಕ್ಕಾಗಿ ಎಸ್ಐಆರ್ ನಡೆಸಲು ಯೋಜಿಸಲಾಗಿದೆ ಎಂದು ವಿರೋಧ ಪಕ್ಷಗಳ ‘ಇಂಡಿಯಾ’ ಬಣವು ಆರೋಪಿಸಿತ್ತು.
ಶ್ರಮಿಕ ವರ್ಗ, ಎಸ್‌ಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಕನಸನ್ನು ಬಜೆಪಿ ಮತ್ತು ಅಣ್ಣಾಡಿಎಂಕೆ ಕಾಣುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.
‘ಚುನಾವಣೆಯಲ್ಲಿ ಜನರ ಮುಂದೆ ನಿಲ್ಲಲಾಗದವರು ಮತದಾನದ ಹಕ್ಕನ್ನು ಕಸಿದು ಚುನಾವಣೆಯಲ್ಲಿ ಗೆಲ್ಲಲು ಯತ್ನಿಸುತ್ತಿದ್ದಾರೆ. ಅವರ ಲೆಕ್ಕ ತಪ್ಪೆಂಬುದು ಅಂತ್ಯದಲ್ಲಿ ತಿಳಿಯಲಿದೆ’ ಎಂದಿದ್ದಾರೆ.
‘ಕಾನೂನುಬದ್ಧವಾಗಿ ಚುನಾವಣೆ ಎದುರಿಸಲು ಡಿಎಂಕೆ ಸಮರ್ಥವಾಗಿದೆ. ಯಾವುದೇ ಪ್ರಜಾಸತ್ತಾತ್ಮಕವಲ್ಲದ ಮಾರ್ಗದಲ್ಲಿ ಬರುವವರನ್ನೂ ಜನರ ಜೊತೆಗೂಡಿ ಎದುರಿಸುತ್ತೇವೆ’ ಎಂದಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.