ADVERTISEMENT

ಮತದಾರರ ಪಟ್ಟಿ ದೋಷರಹಿತವಾಗಿಸಲು ಕ್ರಮ: ಚುನಾವಣಾ ಆಯೋಗ

ಪಿಟಿಐ
Published 1 ಮೇ 2025, 12:30 IST
Last Updated 1 ಮೇ 2025, 12:30 IST
.
.   

ನವದೆಹಲಿ: ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ನಿಖರವಾಗಿ ನಡೆಸಲು ಚುನಾವಣಾ ಆಯೋಗವು ಮರಣ ನೋಂದಣಿ ಮಾಹಿತಿಯನ್ನು ರಿಜಿಸ್ಟ್ರಾರ್ ಜನರಲ್‌ ಆಫ್‌ ಇಂಡಿಯಾದಿಂದ (ಆರ್‌ಜಿಐ) ಎಲೆಕ್ಟ್ರಾನಿಕ್‌ ರೂಪದಲ್ಲಿ ಪಡೆಯಲು ನಿರ್ಧರಿಸಿದೆ.

ಮತದಾರರ ಪಟ್ಟಿ ದೋಷರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವು ಈ ಹೆಜ್ಜೆಯಿಟ್ಟಿದೆ. ಇದು, ಮತದಾರರ ನೋಂದಣಿ ಅಧಿಕಾರಿಗಳು (ಇಆರ್‌ಒ) ಮರಣಗಳ ಬಗ್ಗೆ ಸಕಾಲಿಕ ಮಾಹಿತಿ ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ.

ಮೃತರ ಸಂಬಂಧಿಕರು ಮಾಹಿತಿ ನೀಡುವುದನ್ನು ಕಾಯದೆಯೇ ಮನೆಗಳಿಗೆ ಭೇಟಿ ನೀಡುವ ಮೂಲಕ ಮರಣದ ಮಾಹಿತಿಯನ್ನು ಮರು ಪರಿಶೀಲಿಸಲು ಬೂತ್‌ಮಟ್ಟದ ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.

ADVERTISEMENT

1960ರ ಮತದಾರರ ನೋಂದಣಿ ಕಾಯ್ದೆ ಮತ್ತು 1969ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯಡಿ ಅಂತಹ ವಿವರಗಳನ್ನು ಪಡೆಯುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.

ಮತದಾರರ ಮಾಹಿತಿ ಒಳಗೊಂಡ ಸ್ಲಿಪ್‌ಗಳನ್ನು ಇನ್ನಷ್ಟು ಮತದಾರ ಸ್ನೇಹಿಯನ್ನಾಗಿ ಮಾಡಲು, ಆಯೋಗವು ಅದರ ವಿನ್ಯಾಸವನ್ನು ಮಾರ್ಪಡಿಸಲು ನಿರ್ಧರಿಸಿದೆ.

ಸ್ಲಿಪ್‌ಗಳಲ್ಲಿ ಮತದಾರರ ಕ್ರಮಸಂಖ್ಯೆಯನ್ನು ದೊಡ್ಡ ಗಾತ್ರ ಮತ್ತು ದಪ್ಪ ಅಕ್ಷರದಲ್ಲಿ ಬರೆಯಲಾಗುತ್ತದೆ. ಮತದಾರರಿಗೆ ತಮ್ಮ ಮತಗಟ್ಟೆಯನ್ನು ಗುರುತಿಸಲು ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.