ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಮಧ್ಯವರ್ತಿ ಮೈಕಲ್‌ ಭಾರತಕ್ಕೆ ಗಡಿಪಾರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 18:47 IST
Last Updated 4 ಡಿಸೆಂಬರ್ 2018, 18:47 IST
   

ನವದೆಹಲಿ: ‘ಯುಪಿಎ ಅವಧಿಯ ₹3,600 ಕೋಟಿ ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್ ಅವರನ್ನು ಯುಎಇ ಗಡಿಪಾರು ಮಾಡಿದೆ.

ಮೈಕಲ್‌ ಅವರನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಕರೆತರಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಷ್ಟೇ ಬಾಕಿಯಿದೆ. ರಫೇಲ್‌ ಒಪ್ಪಂದದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಕಾಂಗ್ರೆಸ್‌ಗೆ ಈ ಬೆಳವಣಿಗೆಯಿಂದ ಹಿನ್ನಡೆ ಆಗಲಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ADVERTISEMENT

ಒಪ್ಪಂದ ಕುದುರಿಸುವ ಉದ್ದೇಶದಿಂದ ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವ ಸಲುವಾಗಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಹಣ ಪಡೆದ ಆರೋಪ ಮೈಕಲ್ ಮೇಲಿದೆ. ‘ಮನಮೋಹನ್ ಸಿಂಗ್, ಅಹಮದ್ ಪಟೇಲ್‌ ಮತ್ತು ಸೋನಿಯಾ ಗಾಂಧಿ ಅವರ ಹೆಸರು ಮೈಕಲ್‌ನ ದಿನಚರಿಯಲ್ಲಿದೆ.

ಹಲವರಿಗೆ ಹಣ ನೀಡಿದ್ದರ ವಿವರವೂ ಅದರಲ್ಲಿದೆ’ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಆದರೆ ಯಾರಿಗೆ ಹಣ ನೀಡಲಾಗಿದೆ ಎಂಬುದರ ಬಗ್ಗೆ ವಿವರ ಲಭ್ಯವಿಲ್ಲ.

ಗಣ್ಯವ್ಯಕ್ತಿಗಳ ಓಡಾಟಕ್ಕೆ 12 ಐಷಾರಾಮಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬ್ರಿಟನ್‌ನ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿ ಜತೆಗೆ 2010ರಲ್ಲಿ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಅವ್ಯವಹಾರದ ಆರೋಪ ಕೇಳಿಬಂದಿದ್ದರಿಂದ 2014ರ ಜನವರಿಯಲ್ಲಿ ಒಪ್ಪಂದವನ್ನು ರದ್ದು ಮಾಡಲಾಗಿತ್ತು.

ಆರೋಪದ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸಿದ್ದವು.

ಹಗರಣದ ಪ್ರಮುಖ ಮಧ್ಯವರ್ತಿಗಳಾದ ಕಾರ್ಲೊ ಗೆರೊಸಾ, ಗ್ಯೂಡೊ ಹಷ್ಕೆ ಹಾಗೂ ಕ್ರಿಶ್ಚಿಯನ್‌ ಮೈಕಲ್‌ ಪೈಕಿ ಇದೀಗ ಮೈಕಲ್‌ ಹಗರಣದ ಸಂಬಂಧ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.ಮೈಕೆಲ್‌ನನ್ನು ಕಳೆದ ವರ್ಷ ಯುಎಎಇಯಲ್ಲಿ ಬಂಧಿಸಿ, ಗಡಿಪಾರು ವಿಚಾರಣೆ ನಡೆಸಲಾಗಿತ್ತು.

ಇಟಲಿ ಮೂಲದ ಫಿನ್‌ಮೆಕನಿಕಾದ ಬ್ರಿಟನ್‌ನ ಅಂಗಸಂಸ್ಥೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಗಣ್ಯರ ಸಂಚಾರಕ್ಕೆಂದು 12 'ಎಡಬ್ಲ್ಯೂ-101' ಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ 2007ರಲ್ಲಿ ಭಾರತ ಸಹಿ ಹಾಕಿತ್ತು. ನಂತರ ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಒಪ್ಪಂದ ಕುದುರಿಸುವ ಸಲುವಾಗಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಪಾವತಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ನಂತರ 2014ರ ಜನವರಿಯಲ್ಲಿ ಕೇಂದ್ರ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು.

ಹಗರಣಕ್ಕೆ ಸಂಬಂಧಿಸಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಸೇರಿದಂತೆ 72 ಜನರನ್ನು ಬಂಧಿಸಲಾಗಿತ್ತು.

ಮುಖ್ಯಾಂಶಗಳು

* ಯುಎಇಯಲ್ಲಿ ನೆಲೆಸಿದ್ದ ಶಂಕಿತ ಮಧ್ಯವರ್ತಿ ಮೈಕಲ್‌

* ಆರೋಪಿಯ ಗಡಿಪಾರಿಗಾಗಿ ಯುಎಇಗೆ ಮನವಿ ಸಲ್ಲಿಸಿದ್ದ ಇ.ಡಿ

* ಗಡಿಪಾರು ವಿರುದ್ಧ ಮೈಕಲ್‌ನ ಅರ್ಜಿ ತಿರಸ್ಕರಿಸಿದ್ದ ಯುಎಇ ನ್ಯಾಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.