ನವದೆಹಲಿ: ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಅಂಗದ್ ಛಾಂದೋಕ್‌ನನ್ನು ಸಿಬಿಐ ಅಧಿಕಾರಿಗಳು ನವದೆಹಲಿಯಲ್ಲಿ ಬಂಧಿಸಿದರು.
ಇಂಟರ್‌ಪೋಲ್‌ನಿಂದ ರೆಡ್‌ಕಾರ್ನರ್ ನೋಟಿಸ್ ಜಾರಿಯಾದ ಬಳಿಕ ಅಂಗದ್‌ನನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿತ್ತು. ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ, ವಶಕ್ಕೆ ಪಡೆದು ಬಂಧಿಸಲಾಯಿತು’ ಎಂದು ಸಿಬಿಐನ ಅಧಿಕಾರಿಗಳು ತಿಳಿಸಿದರು.
ನಂತರ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು.
‘ಅಂತರರಾಷ್ಟ್ರೀಯ ತಂತ್ರಜ್ಞಾನ ನೆರವು ಹಗರಣದಲ್ಲಿ ವಂಚಿಸಿದ ಆರೋಪದ ಮೇಲೆ 2022ರಲ್ಲಿ ಅಮೆರಿಕದ ನ್ಯಾಯಾಲಯವು ಅಂಗದ್‌ನನ್ನು ಅಪರಾಧಿ ಎಂದು ಘೋಷಿಸಿತ್ತು. ವಂಚನೆಗೊಳಗಾದವರಲ್ಲಿ ಅಮೆರಿಕದ ಹಿರಿಯ ನಾಗರಿಕರೇ ಹೆಚ್ಚಿದ್ದು, ತಮ್ಮ ಉಳಿತಾಯದ ಹಣವನ್ನು ಕಳೆದುಕೊಂಡಿದ್ದರು’ ಎಂದು ಅಮೆರಿಕದ ಕಾನೂನು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
‘ಅಮೆರಿಕದಲ್ಲಿ ಆಶ್ರಯ ಪಡೆದ ಭಾರತೀಯ ಪ್ರಜೆ ಅಂಗದ್ ನೂರಾರು ಅಮೆರಿಕನ್ನರಿಗೆ ವಂಚಿಸಿದ್ದರು. ಈ ಪ್ರಕರಣದಲ್ಲಿ ಅವರಿಗೆ 6 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿತ್ತು’ ಎಂದು ಅಮೆರಿಕದ ವಕೀಲ ಝಕರಿ ಎ.ಕುನ್ಹಾ ತಿಳಿಸಿದರು.
‘ಕ್ಯಾಲಿಫೋರ್ನಿಯಾದಲ್ಲಿ ಅಂಗದ್ ದೀರ್ಘಕಾಲದಿಂದ ಹಣ ಅಕ್ರಮ ವರ್ಗಾವಣೆಯ ಜಾಲ ನಡೆಸುತ್ತಿದ್ದ. ತಂತ್ರಜ್ಞಾನದ ನೆರವು ಯೋಜನೆ, ಪ್ರಯಾಣ ಶುಲ್ಕ ಯೋಜನೆ ಅಡಿಯಲ್ಲಿ ಅಮೆರಿಕದ ಸಾವಿರಾರು ಹಿರಿಯ ನಾಗರಿಕರಿಗೆ ವಂಚಿಸಿದ್ದರು. ಈ ಹಣವನ್ನು ನಕಲಿ ಕಂಪನಿ ಸೃಷ್ಟಿಸಿ, ಅದರ ಮೂಲಕ ಅಕ್ರಮವಾಗಿ ವರ್ಗಾಯಿಸುತ್ತಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೃಹತ್ ಜಾಲ ಹೊಂದಿದ್ದರು’ ಎಂದು ಝಕರಿ ಎ.ಕುನ್ಹಾ ವಿವರಿಸಿದರು.
2014ರಲ್ಲಿ ಯೂನಿಯನ್ ಬ್ಯಾಂಕ್‌ಗೆ ವಂಚಿಸಿದ್ದ ಪ್ರಕರಣದಲ್ಲಿಯೂ ಅಂಗದ್ ಪ್ರಮುಖ ಆರೋಪಿ. ತಂದೆ ಸುರೇಂದ್ರಸಿಂಗ್, ತಾಯಿ ಹರ್ಲೀನ್ ಕೌರ್, ಸಹೋದರ ಹರ್‌ಸಾಹೀಬ್ ಸಿಂಗ್, ಅಂಗದ್ ಹಾಗೂ ಬ್ಯಾಂಕ್‌ನ ಸಿಬ್ಬಂದಿ ಜೊತೆಗೂಡಿ ವಂಚಿಸಿದ್ದರು. ಇದರಿಂದ ಯೂನಿಯನ್ ಬ್ಯಾಂಕ್‌ಗೆ ನಷ್ಟ ಉಂಟಾಗಿತ್ತು. ಕಾನೂನಿನ ವಿಚಾರಣೆಯಿಂದ ಪಾರಾಗಲು 2016ರಲ್ಲಿ ಕುಟುಂಬ ಸದಸ್ಯರೊಂದಿಗೆ ಅಮೆರಿಕಕ್ಕೆ ಪರಾರಿಯಾಗಿದ್ದರು.
ಇದಾದ ಬಳಿಕ ಅಂಗದ್ ಹಾಗೂ ಕುಟುಂಬಸ್ಥರನ್ನು ಘೋಷಿತ ಅಪರಾಧಿಗಳು ಎಂದು ಘೋಷಿಸಿದ್ದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. 2017ರಲ್ಲಿ ಇಂಟರ್‌ಪೋಲ್ ನೆರವಿನಿಂದ ಸಿಬಿಐ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.
‘2012ರಿಂದ ದೇಶಕ್ಕೆ ಬೇಕಿದ್ದ 100 ಮಂದಿ ಕುಖ್ಯಾತ ಕ್ರಿಮಿನಲ್‌ಗಳನ್ನು ಇಂಟರ್‌ಪೋಲ್ ನೆರವಿನಿಂದ ಭಾರತಕ್ಕೆ ಕರೆತರಲಾಗಿದೆ’ ಎಂದು ಸಿಬಿಐನ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.