ADVERTISEMENT

ವಕ್ಫ್ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

ಪಿಟಿಐ
Published 15 ಸೆಪ್ಟೆಂಬರ್ 2025, 18:46 IST
Last Updated 15 ಸೆಪ್ಟೆಂಬರ್ 2025, 18:46 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷ ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಷರತ್ತು ಸೇರಿದಂತೆ ವಕ್ಫ್‌ (ತಿದ್ದುಪಡಿ) ಕಾಯ್ದೆ–2025ರ ಕೆಲವು ಪ್ರಮುಖ ಅಂಶಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ. ಆದರೆ, ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

‘ಕಾಯ್ದೆಯು ಸಂವಿಧಾನಬದ್ಧವಾಗಿಯೇ ಇದೆ ಎಂದು ನಾವು ಭಾವಿಸುತ್ತೇವೆ. ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಮಧ್ಯಪ್ರವೇಶಿಸಲು ಬಯಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸೀಹ್ ಅವರ ಪೀಠವು ಮಹತ್ವಪೂರ್ಣವಾದ ಮಧ್ಯಂತರ ಆದೇಶದಲ್ಲಿ ಹೇಳಿದೆ.

‘ಹೊಸ ಕಾಯ್ದೆಯಲ್ಲಿನ ಪ್ರತಿಯೊಂದು ಅಂಶವನ್ನೂ ಗಣನೆಗೆ ತೆಗೆದುಕೊಂಡಿದ್ದೇವೆ. ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡುವಂತಹ ಅವಶ್ಯಕತೆ ಕಂಡುಬಂದಿಲ್ಲ. ಆದ್ದರಿಂದ, ಕಾಯ್ದೆಗೆ ತಡೆ ನೀಡಬೇಕೆಂಬ ಕೋರಿಕೆಯನ್ನು ತಿರಸ್ಕರಿಸಲಾಗಿದೆ’ ಎಂದು 128 ಪುಟಗಳ ಆದೇಶದಲ್ಲಿ ತಿಳಿಸಿದೆ.

ADVERTISEMENT

ಆದಾಗ್ಯೂ, ‘ಕಕ್ಷಿದಾರರ ಹಿತಾಸಕ್ತಿ ರಕ್ಷಿಸಲು’ ಮತ್ತು ‘ನ್ಯಾಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು’, ವಕ್ಫ್ ಆಸ್ತಿಗಳ ಸಿಂಧುತ್ವವನ್ನು ನಿರ್ಣಯಿಸಲು ಜಿಲ್ಲಾಧಿಕಾರಿಗೆ ಪರಮಾಧಿಕಾರ ನೀಡಿರುವುದೂ ಸೇರಿದಂತೆ ಕೆಲವು ಅಂಶಗಳಿಗೆ ಮಧ್ಯಂತರ ತಡೆ ಆದೇಶ ನೀಡಿತು. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯದ ಕುರಿತೂ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದೆ.

ವಕ್ಫ್ ಮಂಡಳಿಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ನೇಮಕಾತಿ ಮತ್ತು ಅವರ ಅಧಿಕಾರದ ಅವಧಿ ಹಾಗೂ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಕಾಯ್ದೆಯ ಸೆಕ್ಷನ್‌ 23ಕ್ಕೆ ಪೀಠವು ತಡೆ ನೀಡಲಿಲ್ಲ. ಆದರೆ ಈ ಹುದ್ದೆಗೆ ‘ಸಾಧ್ಯವಾದಷ್ಟೂ’ ಮುಸ್ಲಿಂ ಸಮುದಾಯದವರನ್ನೇ ನೇಮಿಸಲು ಪ್ರಯತ್ನಿಸಬೇಕು ಎಂದು ಸಂಬಂಧಪಟ್ಟ ವರಿಗೆ ನಿರ್ದೇಶನ ನೀಡಿದೆ.

ತಾನು ನೀಡಿರುವ ನಿರ್ದೇಶನಗಳು ಮಧ್ಯಂತರ ಸ್ವರೂಪದ್ದಾಗಿವೆ ಎಂದು ಪೀಠವು ಹೇಳಿದೆ. ಅಂತಿಮ ವಿಚಾರಣೆಯ ಸಮಯದಲ್ಲಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ಕುರಿತಂತೆ ಪೂರ್ಣ ವಾದ ಮಂಡಿಸುವುದರಿಂದ ಅರ್ಜಿದಾರರು ಅಥವಾ ಸರ್ಕಾರವನ್ನು ಈ ನಿರ್ದೇಶನಗಳು ತಡೆಯುವುದಿಲ್ಲ ಎಂದೂ ಸ್ಪಷ್ಟಪಡಿಸಿತು.

ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ಕುರಿತಂತೆ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ಪೀಠ, ‘ಕಾಯ್ದೆಯ ಅಂಶಗಳನ್ನು ತಡೆಹಿಡಿಯುವ ಮೂಲಕ ಮಧ್ಯಂತರ ತೀರ್ಪು ನೀಡುವಲ್ಲಿ ನ್ಯಾಯಾಲಯಗಳು ಬಹಳ ನಿಧಾನವಾಗಿರಬೇಕು. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಮಧ್ಯಂತರ ತೀರ್ಪು ನೀಡಬಹುದು’ ಎಂದು ಹೇಳಿತು.

ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದಿಂದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಾಗಲಿದೆ ಎಂದು ನಾನು ನಂಬಿದ್ದೇನೆ. ವಕ್ಫ್‌ ಕಾಯ್ದೆಯ ಅಂಶಗಳು ಎಲ್ಲ ಮುಸ್ಲಿಮರಿಗೂ ಪ್ರಯೋಜನಕಾರಿಯಾಗಿವೆ
–ಕಿರಣ್‌ ರಿಜಿಜು, ಕೇಂದ್ರ ಸಚಿವ
ವಕ್ಫ್‌ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ಆದೇಶವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಕಾಂಗ್ರೆಸ್‌ ಪಕ್ಷದ ಸಂಕಲ್ಪವನ್ನು ಪುನರುಚ್ಚರಿಸಿದೆ
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಆದೇಶದ ಪ್ರಮುಖಾಂಶಗಳು

  • ಕನಿಷ್ಠ ಐದು ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಅಂಶ ಹೊಂದಿರುವ ಸೆಕ್ಷನ್ 3(1)(ಆರ್‌)ಗೆ ಪೀಠ ತಡೆ ನೀಡಿದೆ

  • ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆಗೂ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಹೇಳಿದೆ

  • ‘ವಿವಾದದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ನಿಯೋಜಿತ ಅಧಿಕಾರಿ ತನ್ನ ವರದಿ ಸಲ್ಲಿಸುವವರೆಗೂ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿಗಣಿಸಬಾರದು’ ಎಂದು ಹೇಳುವ ಅಂಶಕ್ಕೂ ತಡೆ ನೀಡಿದೆ

  • ನಿಯೋಜಿತ ಅಧಿಕಾರಿಯು ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ನಿರ್ಧರಿಸಿದರೆ, ಅವರು ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೆ ತಡೆ ನೀಡಲಾಗಿದೆ

  • ವಿವಾದಿತ ಆಸ್ತಿಯ ಮಾಲೀಕತ್ವದ ಬಗ್ಗೆ ನ್ಯಾಯಮಂಡಳಿಯು ಅಂತಿಮ ನಿರ್ಣಯ ತೆಗೆದುಕೊಳ್ಳುವವರೆಗೆ ಮತ್ತು ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮುಂದಿನ ಆದೇಶದವರೆಗೆ ಆ ಆಸ್ತಿಯ ಹಕ್ಕನ್ನು ಯಾವುದೇ ಮೂರನೇ ವ್ಯಕ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ

  • ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್‌ ಪರಿಷತ್ತಿನಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯಕ್ಕೆ ಮಿತಿ ಹೇರಿದೆ

  • ಕೇಂದ್ರ ವಕ್ಫ್‌ ಪರಿಷತ್ತಿನ 22 ಸದಸ್ಯರಲ್ಲಿ ಗರಿಷ್ಠ ನಾಲ್ವರು ಮುಸ್ಲಿಮೇತರರು ಇರಬಹುದು

  • ರಾಜ್ಯ ವಕ್ಫ್‌ ಮಂಡಳಿಯ 11 ಸದಸ್ಯರಲ್ಲಿ ಗರಿಷ್ಠ ಮೂವರು ಮುಸ್ಲಿಮೇತರರಿಗಷ್ಟೇ ಅವಕಾಶ

ಪೀಠ ಹೇಳಿದ್ದು...

  • ಕಾಯ್ದೆಯು ಅಸಾಂವಿಧಾನಿಕವಾಗಿದೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು
    ಉಲ್ಲಂಘಿಸುತ್ತಿದೆ ಎಂದೆನಿಸಿದಾಗ ಮಾತ್ರ ಅದನ್ನು ತಡೆಹಿಡಿಯಬೇಕು

  • ಪೀಠವು ಒಂದು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಗಣಿಸುವಾಗ ಅದರ ನೈಜ ಸ್ವರೂಪ, ಕಾರ್ಯವ್ಯಾಪ್ತಿ ಮತ್ತು ಉದ್ದೇಶವನ್ನು ಪರಿಗಣಿಸುವುದು ಅಗತ್ಯ

  • ಸಂವಿಧಾನದಲ್ಲಿರುವ ಅಂಶಗಳ ಸ್ಪಷ್ಟ ಉಲ್ಲಂಘನೆಯ ಹೊರತು, ಸಂಸತ್ತು ಅಥವಾ ರಾಜ್ಯ ಶಾಸಕಾಂಗ ರೂಪಿಸಿದ ಕಾಯ್ದೆಯನ್ನು ಅಮಾನ್ಯವೆಂದು ಘೋಷಿಸಲು ಸಾಧ್ಯವಿಲ್ಲ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.