ನವದೆಹಲಿ: ಸಂಸತ್ತಿನ ಅಂಗೀಕಾರ ಪಡೆದಿರುವ ವಕ್ಫ್ (ತಿದ್ದುಪಡಿ) ಕಾಯ್ದೆಯು ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ ಎಂದು ಭಾವಿಸಬೇಕಾಗುತ್ತದೆ ಎನ್ನುವ ಮಾತನ್ನು ಪುನರುಚ್ಚರಿಸಿರುವ ಸುಪ್ರೀಂ ಕೋರ್ಟ್, ಕಾಯ್ದೆಗೆ ಸಂಬಂಧಿಸಿದ ಮೂರು ಪ್ರಮುಖ ವಿಚಾರಗಳ ಕುರಿತ ಮಧ್ಯಂತರ ಆದೇಶವನ್ನು ಗುರುವಾರ ಕಾಯ್ದಿರಿಸಿದೆ.
ಕೋರ್ಟ್‌ಗಳು ವಕ್ಫ್ ಎಂದು ಘೋಷಿಸಿರುವ, ಬಳಕೆಯ ಕಾರಣದಿಂದಾಗಿ ವಕ್ಫ್ ಆಗಿರುವ ಮತ್ತು ಕ್ರಯಪತ್ರದ ಮೂಲಕ ವಕ್ಫ್ ಆಗಿರುವ ಆಸ್ತಿಗಳನ್ನು ಅಧಿಸೂಚನೆಯಿಂದ ಕೈಬಿಡುವ (ಡಿನೋಟಿಫೈ) ಅಧಿಕಾರವು ಈ ಮೂರು ವಿಚಾರಗಳ ಪೈಕಿ ಒಂದಾಗಿದೆ. ಡಿನೋಟಿಫೈ ಮಾಡುವ ಅಧಿಕಾರವನ್ನು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ಪೀಠವು ಮಧ್ಯಂತರ ಆದೇಶವನ್ನು ಕಾಯ್ದಿರಿಸುವುದಕ್ಕೂ ಮೊದಲು, ಅರ್ಜಿದಾರರು ಹಾಗೂ ಕೇಂದ್ರದ ಪರ ವಕೀಲರ ವಾದವನ್ನು ಸತತ ಮೂರು ದಿನ ಆಲಿಸಿದೆ.
ಸಂಸತ್ತು ರೂಪಿಸಿದ ಕಾನೂನು ಸಾಂವಿಧಾನಿಕವಾಗಿ ಸರಿಯಾಗಿರುತ್ತದೆ ಎಂದೇ ಭಾವಿಸಬೇಕಾಗುತ್ತದೆ ಎನ್ನುವ ಮಾತನ್ನು ಸಿಜೆಐ ಗವಾಯಿ ಅವರು ಗುರುವಾರ ಕೂಡ ಹೇಳಿದರು.
‘ಮಧ್ಯಂತರ ತಡೆ ಬೇಕು ಎಂದಾದರೆ ನೀವು ಬಲವಾದ ವಾದವನ್ನು ಮಂಡಿಸಬೇಕಾಗುತ್ತದೆ. ಇಲ್ಲದಿದ್ದರೆ, ಕಾಯ್ದೆಯು ಸಾಂವಿಧಾನಿಕವಾಗಿ ಸರಿಯಾಗಿ ಇದೆ ಎಂಬುದಾಗಿ ಭಾವಿಸಬೇಕಾಗುತ್ತದೆ’ ಎಂದು ಸಿಜೆಐ ಅವರು ಮೇ 20ರಂದು ಹೇಳಿದ್ದರು.
ವಕ್ಫ್ ಆಸ್ತಿಗಳ ಡಿನೋಟಿಫಿಕೇಷನ್ ಮಾತ್ರವೇ ಅಲ್ಲದೆ, ರಾಜ್ಯ ವಕ್ಫ್ ಮಂಡಳಿಗಳು ಹಾಗೂ ಕೇಂದ್ರ ವಕ್ಫ್ ಪರಿಷತ್ತಿನ ಸ್ವರೂಪದ ಬಗ್ಗೆಯೂ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ. ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿದರೆ, ಮುಸ್ಲಿಮರು ಮಾತ್ರವೇ ಪರಿಷತ್ತು ಮತ್ತು ಮಂಡಳಿಗಳ ಸದಸ್ಯರಾಗಿರಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಆಸ್ತಿಯೊಂದು ಸರ್ಕಾರಕ್ಕೆ ಸೇರಿರುವುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಯು ವಿಚಾರಣೆ ನಡೆಸಿದಾಗ ಅಂತಹ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ಅಂಶದ ಬಗ್ಗೆಯೂ ಆಕ್ಷೇಪ ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಗುರುವಾರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳಿಂದ ಪಾಲಿಸುತ್ತಿರುವ ವ್ಯಕ್ತಿ ಮಾತ್ರವೇ ವಕ್ಫ್‌ಗೆ ಆಸ್ತಿ ನೀಡಬಹುದು ಎಂದು ಕಾನೂನಿನಲ್ಲಿ ಹೇಳಿರುವುದನ್ನು ಸಮರ್ಥಿಸಿಕೊಂಡರು.
ವಕ್ಫ್‌ಗೆ ವಂಚನೆಯ ಮೂಲಕ ಆಸ್ತಿ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಈ ಅಂಶ ಸೇರಿಸಲಾಗಿದೆ ಎಂದು ಹೇಳಿದರು. ‘ಹಿಂದೂ ಒಬ್ಬ ದತ್ತಿ ಸಂಸ್ಥೆಯನ್ನು ಆರಂಭಿಸಬೇಕು ಎಂದಾದರೆ ಅದಕ್ಕೆ ಕಾನೂನಿನ ಅಡಿ ಮಾರ್ಗ ಇದೆ. ವಕ್ಫ್ ಏಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಪ್ರಶ್ನಿಸಿದರು. ಮುಸ್ಲಿಮೇತರರು ಟ್ರಸ್ಟ್‌ಗಳನ್ನು ಸೃಷ್ಟಿಸುವ ಮೂಲಕ ದತ್ತಿ ಕೆಲಸ ಮಾಡಬಹುದು ಎಂದರು.
‘ವಕ್ಫ್ ಆಸ್ತಿ ಸೃಷ್ಟಿಸುವುದಕ್ಕೂ ವಕ್ಫ್‌ಗೆ ಆಸ್ತಿ ದಾನ ಮಾಡುವುದಕ್ಕೂ ವ್ಯತ್ಯಾಸವಿದೆ. ಹಿಂದೂ ಧರ್ಮೀಯರು ವಕ್ಫ್‌ಗೆ ದಾನ ನೀಡಬಹುದು. ಆದರೆ ವಕ್ಫ್ ಆಸ್ತಿ ಸೃಷ್ಟಿಸುವ ಅವಕಾಶ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.