ಕೊಚ್ಚಿ: ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಕೆಲ ಗಂಟೆಗಳ ಬೆನ್ನಲ್ಲೇ ಕೇರಳದ ಮುನಂಬಮ್‌ನಲ್ಲಿ ವಕ್ಫ್ ಮಂಡಳಿ ಜೊತೆ ಭೂ ವಿವಾದದಲ್ಲಿ ಸಿಲುಕಿರುವ 50 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಇತರ ಎನ್‌ಡಿಎ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.
ತಮ್ಮ ಭೂಮಿ ಮೇಲಿನ ಹಕ್ಕು ಪಡೆಯುವವರೆಗೂ ಬಿಜೆಪಿ ನೇತೃತ್ವದ ಎನ್‌ಡಿಎ ನೆರವು ನೀಡಲಿದೆ ಎಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದವರಿಗೆ ಮುಖಂಡರು ಭರವಸೆ ನೀಡಿದ್ದಾರೆ.
ಕ್ಯಾಥೋಲಿಕ್ ಚರ್ಚ್‌ನ ಬೆಂಬಲದೊಂದಿಗೆ ಇಲ್ಲಿನ ನಿವಾಸಿಗಳು ಕಳೆದ 174 ದಿನಗಳಿಂದ ತಮ್ಮ ಆಸ್ತಿಗಳ ಮೇಲಿನ ಕಂದಾಯ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಮಿ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ ಎನ್ನಲಾಗುತ್ತಿದೆ.
ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರವು ಭೂಮಿಯ ಮೇಲಿನ ವಕ್ಫ್ ಮಂಡಳಿಯ ಹಕ್ಕುಗಳ ಇತ್ಯರ್ಥಕ್ಕೆ ಕಾರಣವಾಗುತ್ತದೆ ಎಂದು ಅವರು ಆಶಿಸಿದ್ದಾರೆ.
ತಮ್ಮ ನೋವ ತೋಡಿಕೊಳ್ಳಲು ಪ್ರಧಾನಿ ಜೊತೆ ನೇರ ಭೇಟಿಗೂ ಅವಕಾಶ ಕೊಡಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಈ ಸಂತ್ರಸ್ತರ ಅಳಲನ್ನು ಇಲ್ಲಿನ ಚುನಾಯಿತ ಸರ್ಕಾರ ಕಡೆಗಣಿಸಿದೆ. ಅವರ ಸಮಸ್ಯೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿದೆ. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದೂ ಅವರು ಭರವಸೆ ನೀಡಿದ್ದಾರೆ.
ವಕ್ಫ್ ಮಸೂದೆ ಅಂಗೀಕಾರವಾದ ಬಳಿಕ ಮುನಂಬಮ್ ಜನರ ಸಮಸ್ಯೆ ಬಗೆಹರಿಸುವುದಾಗಿ ಯಾವೊಬ್ಬ ನಾಯಕರೂ ಹೇಳಿಲ್ಲ ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಟೀಕಿಸಿದ್ದಾರೆ.
ವಕ್ಫ್ ಮಸೂದೆ ಅಂಗೀಕಾರದಿಂದಾಗಿ ಮುನಂಬಮ್ ಜನರ ಸಮಸ್ಯೆಗೆ ನಿಜವಾಗಿಯೂ ಪರಿಹಾರ ಸಿಗಲಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.