ADVERTISEMENT

ರಾಷ್ಟ್ರೀಯ ಯುದ್ಧ ಸ್ಮಾರಕ ಇಂದು ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:00 IST
Last Updated 24 ಫೆಬ್ರುವರಿ 2019, 20:00 IST
ರಾಷ್ಟ್ರೀಯ ಯುದ್ಧ ಸ್ಮಾರಕ
ರಾಷ್ಟ್ರೀಯ ಯುದ್ಧ ಸ್ಮಾರಕ   

ನವದೆಹಲಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 25,942 ಯೋಧರ ನೆನಪಿನಲ್ಲಿ ನಿರ್ಮಿಸಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧಸ್ಮಾರಕ ಸೋಮವಾರ ಉದ್ಘಾಟನೆಗೊಳ್ಳಲಿದೆ.

ಇಂಡಿಯಾ ಗೇಟ್ ಸಮೀಪ 40 ಎಕರೆ ವಿಸ್ತೀರ್ಣದಲ್ಲಿ ಸ್ಮಾರಕ ತಲೆ ಎತ್ತಿದೆ. ನಾಲ್ಕು ಕೇಂದ್ರೀಕೃತ ವಲಯಗಳನ್ನು ನಿರ್ಮಿಸಲಾಗಿದ್ದು, ಪುರಾತನ ಚಕ್ರವ್ಯೂಹ ಯುದ್ಧತಂತ್ರಗಾರಿಕೆಯನ್ನು ಇದು ಸಂಕೇತಿಸುತ್ತದೆ. 15 ಅಡಿ ಎತ್ತರದ ಸ್ತಂಭದ ಮೇಲೆ ಇರಿಸಿರುವ ಜ್ಯೋತಿಯನ್ನು ಬೆಳಗುವ ಮೂಲಕಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರಕ ಲೋಕಾರ್ಪಣೆ ಮಾಡಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ, ಗಣತಂತ್ರ ದಿವಸಗಳಂದು ಅಥವಾ ವಿದೇಶಿ ಗಣ್ಯರು ಆಗಮಿಸಿದಾಗ ಈ ಸ್ಮಾರಕದ ಮೇಲೆ ಹೂಗುಚ್ಛ ಇರಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಪಿ.ಎಸ್. ರಾಜೇಶ್ವರ್ ತಿಳಿಸಿದ್ದಾರೆ.

ADVERTISEMENT

ಅಮರಜವಾನ್ ಜ್ಯೋತಿ ಸ್ಮಾರಕವೂ ಇಲ್ಲಿಗೆ ಸ್ಥಳಾಂತರವಾಗಲಿದೆ.ಪಾಕಿಸ್ತಾನದ ಜೊತೆಗಿನ ಯುದ್ಧ (1947–48 ಮತ್ತು 1965), ಚೀನಾ (1962), ಕಾರ್ಗಿಲ್ ಯುದ್ಧ (1999), ಆಪರೇಷನ್ ಪರಾಕ್ರಮದಲ್ಲಿ (2002–04) ಹುತಾತ್ಮರಾದ ಯೋಧರ ಹೆಸರುಗಳನ್ನು ನೂತನ ಸ್ಮಾರಕದ ಇಟ್ಟಿಗೆಗಳಲ್ಲಿ ಕೆತ್ತಲಾಗಿದೆ.

ಪರಮವೀರ ಚಕ್ರ ಪಡೆದ 21 ಯೋಧರಿಗೆ ವಿಶೇಷ ಗೌರವ ನೀಡಲಾಗಿದೆ. ಕಳೆದ 7 ದಶಕಗಳಲ್ಲಿ ಭಾರತ ನಡೆಸಿದ ಯುದ್ಧಗಳ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ.

ಮೊದಲ ಮಹಾಯುದ್ಧ ಹಾಗೂ ಆಂಗ್ಲೊ–ಆಫ್ಗನ್ ಯುದ್ಧದಲ್ಲಿ ಮಡಿದ ಭಾರತದ 83 ಸಾವಿರ ಸೈನಿಕರ ನೆನಪಿನಲ್ಲಿ 1931ರಲ್ಲಿ ಇಂಡಿಯಾ ಗೇಟ್ ನಿರ್ಮಾಣವಾಗಿತ್ತು. ಈ ಸ್ಮಾರಕದಲ್ಲಿ ಸುಮಾರು 13 ಸಾವಿರ ಯೋಧರ ಹೆಸರುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.