ಅಪಘಾತದ ಸ್ಥಳ (ಸಿಸಿಟಿವಿ ದೃಶ್ಯ)
ನವದೆಹಲಿ: ದೆಹಲಿಯ ಘಾಜಿಪುರ ಪ್ರದೇಶದಲ್ಲಿ ಚಾಲಕನೊಬ್ಬ ಜನರ ಮೇಲೆಯೇ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಇದರ ಪರಿಣಾಮ 22 ವರ್ಷದ ಮಹಿಳೆಯೊಬ್ಬರು ಮೃತಪಟ್ಟು, ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ.
ಬುಧವಾರ ರಾತ್ರಿ 9ರ ಸುಮಾರಿಗೆ ಘಟನೆ ನಡೆದಿದೆ. ಆಕ್ರೋಶಗೊಂಡ ಸ್ಥಳೀಯರು ವಾಹನವನ್ನು ಜಖಂ ಗೊಳಿಸಿ, ಚಾಲಕನನ್ನು ಥಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನರು ಸಿಟ್ಟಿನಿಂದ ಕಾರಿನ ಬಾಗಿಲುಗಳು, ಕಿಟಕಿಗಳು ಹಾಗೂ ವಿಂಡ್‌ಸ್ಕ್ರೀನ್ ಒಡೆಯುತ್ತಿರುವುದು, ಕಾರನ್ನು ಮಗುಚುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
'ಐವರು ಮಹಿಳೆಯರು, ಇಬ್ಬರು ಪುರುಷರು ಸೇರಿದಂತೆ ಒಟ್ಟು ಏಳು ಗಾಯಗೊಂಡಿದ್ದರು. ಅವರನ್ನೆಲ್ಲ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಡಿಸಿಪಿ ಅಪೂರ್ವ ಗುಪ್ತ ಹೇಳಿದ್ದಾರೆ.
ಚಾಲಕ ಮದ್ಯದ ಅಮಲಿನಲ್ಲಿದ್ದ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಅದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಸಂತ್ರಸ್ತರು ದೆಹಲಿ-ಗಾಜಿಯಾಬಾದ್ ಗಡಿಯಲ್ಲಿರುವ ಖೋಡಾ ಕಾಲೋನಿ ನಿವಾಸಿಗಳು. ಗಾಯಗೊಂಡಿದ್ದ ಸೀತಾ ದೇವಿ ಎಂಬವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.